ಡೈಲಿ ವಾರ್ತೆ: 23/ಏಪ್ರಿಲ್/2025

ಪಾಕ್ ವಿರುದ್ಧ ರಾಜತಾಂತ್ರಿಕ ಯುದ್ಧ: ಸಿಂಧೂ ನದಿನೀರು ಒಪ್ಪಂದಕ್ಕೆ ಬ್ರೇಕ್, ಪಾಕ್ ಪ್ರಜೆಗಳಿಗೆ ದೇಶ ತೊರೆಯಲು ಗಡುವು!

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನ ಕೈವಾಡ ಇರುವುದು ಸಾಬೀತಾಗುತ್ತಿದ್ದಂತೆ ಭಾರತ ಸರ್ಕಾರ ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ಯುದ್ಧ ಆರಂಭಿಸಿದೆ. ಅದರಂತೆ ಪ್ರಮುಖ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ.

ಪಾಕ್ ಜೊತೆಗಿನ ಸಿಂಧೂ ನದಿ ನೀರು ಒಪ್ಪಂದ ಅಮಾನತು. ಪಾಕಿಸ್ತಾನಿ ಪ್ರಜೆಗಳ ವೀಸಾ ರದ್ದಿಗೆ ನಿರ್ಧಾರ. ಭಾರತದಲ್ಲಿರುವ ಪಾಕಿಸ್ತಾನಿ ರಾಯಭಾರ ಕಚೇರಿ ಮುಚ್ಚುವುದು. ಪಾಕ್ ಪ್ರಜೆಗಳಿಗೆ ವೀಸಾ ಕೊಡದಿರಲು ನಿರ್ಧಾರ.
ಪಾಕಿಸ್ತಾನಿ ರಾಜತಾಂತ್ರಿಕರು 48 ಗಂಟೆಗಳ ಒಳಗೆ ಭಾರತವನ್ನು ತೊರೆಯುವಂತೆ ಗಡುವು. ಅಟ್ಟಾರಿ ಗಡಿ ಚೆಕ್‌ಪೋಸ್ಟ್ ಮುಚ್ಚುವ ಪ್ರಮುಖ ನಿರ್ಧಾರಗಳನ್ನು ಸಿಸಿಎಸ್ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು ಸುದ್ದಿಗೋಷ್ಠಿ ನಡೆಸಿ ಈ ಕ್ರಮಗಳನ್ನು ಘೋಷಿಸಿದರು. ಅವುಗಳನ್ನು ರಾಜತಾಂತ್ರಿಕ ಮತ್ತು ಭದ್ರತಾ ಪ್ರತಿಕ್ರಿಯೆಗಳ ವಿಶಾಲ ಗುಂಪಿನ ಭಾಗವೆಂದು ವಿವರಿಸಿದರು. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿಯವರ ತಮ್ಮ ನಿವಾಸದಲ್ಲಿ ಭದ್ರತೆ ಕುರಿತ ಸಂಪುಟ ಸಮಿತಿ (ಸಿಸಿಎಸ್) ಸಭೆ ನಡೆಸಿದ್ದರು. ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ಕೇಂದ್ರ ನಾಯಕರು ಭಾಗವಹಿಸಿದ್ದರು.