



ಡೈಲಿ ವಾರ್ತೆ: 24/ಏಪ್ರಿಲ್/2025


ಮಂಥನ ಬೇಸಿಗೆ ಶಿಬಿರ 5ನೇ ದಿನದ ಕಾರ್ಯಕ್ರಮ ಉದ್ಘಾಟನೆ
“ಪಠ್ಯೇತರ ವಿಷಯದಲ್ಲಿ ಮಕ್ಕಳಿಗೆ ಪರಿಸರ ಸಂರಕ್ಷಣೆಯ ಅರಿವು ಅತ್ಯಗತ್ಯ” – ಜ್ಯೋತಿ ಕೆ.ಸಿ.

ಕುಂದಾಪುರ: ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ವತಿಯಿಂದ ಯಡಾಡಿ- ಮತ್ಯಾಡಿಯ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಮತ್ತು ಸುಜ್ಞಾನ್ ಪಿ.ಯು.ಕಾಲೇಜಿನ ವಿದ್ಯಾರಣ್ಯ ಕ್ಯಾಂಪಸ್ ನಲ್ಲಿ ನಡೆಯುತ್ತಿರುವ ಮಂಥನ ಬೇಸಿಗೆ ಶಿಬಿರ ಐದನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಂಕರನಾರಾಯಣ ವಲಯದ ಅರಣ್ಯಾಧಿಕಾರಿಗಳಾಗಿರುವ ಶ್ರೀಮತಿ ಜ್ಯೋತಿ ಕೆ.ಸಿ. “ಯಾವುದೇ ಒಂದು ದೇಶದ ಪ್ರಾಕೃತಿಕ ಸಮತೋಲನ ಕಾಪಾಡುವಲ್ಲಿ ಅರಣ್ಯಗಳ ಪಾತ್ರ ಬಲು ದೊಡ್ಡದು.ಇಂದು ನಮ್ಮ ದೇಶದಲ್ಲಿ ಅರಣ್ಯ ಪ್ರದೇಶಗಳು ಕಡಿಮೆಯಾಗುತ್ತಿದ್ದು ಅದನ್ನು ಉಳಿಸುವ ಜವಾಬ್ದಾರಿ ಎಲ್ಲರದ್ದಾಗಿದೆ. ಮಕ್ಕಳಿಗೆ ಬಾಲ್ಯದಲ್ಲಿಯೇ ಅರಣ್ಯ ಸಂರಕ್ಷಣೆಯ ಮಹತ್ವ ತಿಳಿಸುವುದು ಭವಿಷ್ಯದ ದೃಷ್ಟಿಯಿಂದ ಉತ್ತಮ. ಪಠ್ಯದ ಅಧ್ಯಯನದ ಜೊತೆಗೆ ಪಠ್ಯೇತರ ವಿಷಯದಲ್ಲಿ ಮಕ್ಕಳಿಗೆ ಪರಿಸರ ಸಂರಕ್ಷಣೆ ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ.

ಬೇಸಿಗೆ ಶಿಬಿರಗಳಲ್ಲಿ ಚಿತ್ರಕಲೆ,ಕ್ರಾಫ್ಟ್ ತಯಾರಿಕೆ ಮೂಲಕ ಪರಿಸರ ಸಂರಕ್ಷಣೆ ಕುರಿತಾದ ಚಟುವಟಿಕೆಗಳು ಮಕ್ಕಳಿಗೆ ಹೆಚ್ಚು ಉಪಯುಕ್ತವಾವುತ್ತದೆ” ಎಂದರು.

ಯಡ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಕಾಶ ಶೆಟ್ಟಿ ಮಾತನಾಡಿ”ನಮ್ಮ ಇಂದಿನ ಯುವ ಜನತೆ ದಾರಿ ತಪ್ಪಲು ಮತ್ತು ಸಮಾಜ ಘಾತುಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವರ ಬಾಲ್ಯದಲ್ಲಿ ಶಾಲೆಯಲ್ಲಿ ಸರಿಯಾದ ಸಂಸ್ಕಾರ ಮತ್ತು ಸಂಸ್ಕೃತಿ ಸಿಗದಿರುವುದೇ ಕಾರಣವಾಗಿದೆ. ಹಾಗಾಗಿ ಮಕ್ಕಳಿಗೆ ಶಾಲಾ ದಿನಗಳಲ್ಲಿ ಪ್ರಾಥಮಿಕ ತರಗತಿಯಲ್ಲಿಯೇ ಒಳ್ಳೆಯ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಪರಿಚಯಿಸುವುದು ಅತ್ಯಗತ್ಯವಾಗಿದೆ. ಈ ಬೇಸಿಗೆ ಶಿಬಿರದಲ್ಲಿ ಮಕ್ಕಳು ಕಲಿಯುವ ಕೌಶಲ, ಸಂಸ್ಕಾರವನ್ನು ಬದುಕಿನುದ್ದಕ್ಕೂ ಉಪಯೋಗಿಸುವಂತಾಗಲಿ”ಎಂದರು.
ಬಿದ್ಕಲ್ ಕಟ್ಟೆ ಕರ್ನಾಟಕ ಪಬ್ಲೀಕ್ ಸ್ಕೂಲ್ ನ ಉಪ ಪ್ರಾಂಶುಪಾಲರಾದ ಕರುಣಾಕರ ಶೆಟ್ಟಿ ಮಾತನಾಡಿ” ಶಾಲೆಯೊಂದು ಬೆಳೆದರೆ ಊರು ಬೆಳೆದಂತೆ.ಯಾವುದೇ ಫಲಾಪೇಕ್ಷೆ ಇಲ್ಲದೆ ಸಂಸ್ಥೆಯ ಆಡಳಿತ ಮಂಡಳಿ ಆಯೋಜಿಸಿದ ಮಂಥನ ಬೇಸಿಗೆ ಶಿಬಿರ ಸುತ್ತಮುತ್ತಲಿನ ಪರಿಸರದ ಬಹುಪಾಲು ಮಕ್ಕಳಿಗೆ ಉಪಯೋಗವಾಗುತ್ತಿದ್ದು ಅವರೆಲ್ಲರೂ ಜ್ಞಾನದ ದೀವಿಗೆಯಾಗಲಿ” ಎಂದರು.
ಹೊಂಬಾಡಿ- ಮಂಡಾಡಿ ಗ್ರಾಮ ಪಂಚಾಯತ್ ನ ಸದಸ್ಯರಾಗಿರುವ ಗಣೇಶ್ ಶೆಟ್ಟಿ ಮಾತನಾಡಿ”ವಿದ್ಯಾಭ್ಯಾಸ ಅಂದರೆ ಕೇವಲ ನೂರಕ್ಕೆ ನೂರು ಅಂಕ ಗಳಿಸುವುದು ಮಾತ್ರವಲ್ಲ. ಮಕ್ಕಳು ಅಂಕ ಗಳಿಕೆಯ ಜೊತೆಗೆ ಬದುಕಿನಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವ ಸಾಮಾರ್ಥ್ಯವನ್ನು,ಕೌಶಲಗಳನ್ನು ಕಲಿಯಬೇಕು. ಈ ನಿಟ್ಟಿನಲ್ಲಿ ಬದುಕಿಗೆ ಅಗತ್ಯವಾದ ಕೌಶಲಗಳನ್ನು ಕಲಿಸುವ ಶಿಬಿರವು ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ”ಎಂದರು.
ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾಗಿರುವ ಡಾ.ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ, ಮುಖ್ಯೋಪಾಧ್ಯಾಯರಾದ ಪ್ರದೀಪ್ ಕೆ.ಉಪಸ್ಥಿತರಿದ್ದರು.


ಈ ದಿನದ ವಿಶೇಷತೆ:
ಪ್ರತಿಭಾನ್ವಿತ ಚಿತ್ರ ಕಲಾವಿದರಾದ ಸಂತೋಷ ಮಾಳ ಮತ್ತು ಮೇಘನಾ ತೆಲ್ಲಾರ್ ಅವರಿಂದ ಚಿತ್ರ ಕಲಾ ತರಬೇತಿ, ಪ್ರತಿಭಾನ್ವಿತ ಚಿತ್ರಕಲಾವಿದರಾದ ರಾಘವೇಂದ್ರ ಹೆಬ್ರಿ ಮತ್ತು ಅನುಷಾ ಅವರಿಂದ ಮರದ ಎಲೆ,ಟೊಂಗೆ ಬಳಸಿ ಚಿತ್ರ ಬಿಡಿಸುವ ಕಲೆ, ತರಬೇತುದಾರ ಹರೀಶ್ ಅವರಿಂದ ನೃತ್ಯ ತರಬೇತಿ ಹಾಗೂ ಕುಂದಾಪುರ ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕುರಿತು ಪ್ರಾತ್ಯಕ್ಷಿಕೆ ನಡೆಯಿತು. ಮಕ್ಕಳು ಬಹಳ ಉತ್ಸುಕತೆಯಿಂದ ಐದನೆಯ ದಿನದ ಶಿಬಿರದಲ್ಲಿ ಪಾಲ್ಗೊಂಡರು.