




ಡೈಲಿ ವಾರ್ತೆ: 26/ಏಪ್ರಿಲ್/2025


ಮಂಥನ ಬೇಸಿಗೆ ಶಿಬಿರ 7ನೇ ದಿನದ ಕಾರ್ಯಕ್ರಮ ಉದ್ಘಾಟನೆ: ಮಕ್ಕಳ ಮಾನಸಿಕ ಆರೋಗ್ಯಕ್ಕೆ ದೈಹಿಕ ಚಟುವಟಿಕೆಗಳು ಬಹಳ ಮುಖ್ಯ – ಟಿ.ಬಿ.ಶೆಟ್ಟಿ

ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ವತಿಯಿಂದ ಯಡಾಡಿ- ಮತ್ಯಾಡಿಯ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಮತ್ತು ಸುಜ್ಞಾನ್ ಪಿ.ಯು.ಕಾಲೇಜಿನ ವಿದ್ಯಾರಣ್ಯ ಕ್ಯಾಂಪಸ್ ನಲ್ಲಿ ನಡೆಯುತ್ತಿರುವ ಮಂಥನ ಬೇಸಿಗೆ ಶಿಬಿರದ ಏಳನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಂದಾಪುರದ ಹಿರಿಯ ನ್ಯಾಯವಾದಿ ಶ್ರೀಯುತ ಟಿ.ಬಿ.ಶೆಟ್ಟಿ “ಕೆಲವು ವರ್ಷಗಳ ಹಿಂದೆ ಮಕ್ಕಳು, ಜನರು ಸಮಯವನ್ನು ಕಳೆಯಲು ಮತ್ತು ಮನರಂಜನೆಗಾಗಿ ಯಕ್ಷಗಾನ, ಕ್ರೀಡೆಗಳಲ್ಲಿ ಭಾಗವಹಿಸುದ್ದರು.ಆದರೆ ಇಂದಿನ ಕಾಲದ ಮಕ್ಕಳು ಅಂತಹ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸುವುದು ಕಡಿಮೆಯಾಗಿದೆ.ಮಕ್ಕಳು ಯಾವಾಗಲೂ ಪರೀಕ್ಷೆಯಲ್ಲಿ ಅಂಕ ಗಳಿಸುವ ಒತ್ತಡದಲ್ಲಿದ್ದಾಗ ಅವರನ್ನು ಒತ್ತಡ ಮುಕ್ತರನ್ನಾಗಿಸಲು ಪಠ್ಯೇತರ ಚಟುವಟಿಕೆಗಳು ಸಹಕಾರಿಯಾಗುತ್ತವೆ.ಬೇಸಿಗೆ ಶಿಬಿರಗಳು ಮಕ್ಕಳ ಮಾನಸಿಕ ಒತ್ತಡವನ್ನು ಕಡಿಮೆಗೊಳಿಸಿ ಒಂದಿಷ್ಟು ಕ್ರಿಯಾಶೀಲರಾಗಲು,ಉಲ್ಲಾಸದಿಂದಿರಲು ಸಹಾಯವಾಗುತ್ತದೆ.ಮಕ್ಕಳು ಹೆಚ್ಚು ವ್ಯಾಯಾಮ,ಆಟಗಳು ಮುಂತಾದ ದೈಹಿಕ ಚಟುವಟಿಕೆಗಳಲ್ಲಿ ತೊಡಗಿದಾಗ ಅವರ ಮಾನಸಿಕ ಆರೋಗ್ಯ ಸಮತೋಲನದಲ್ಲಿರುತ್ತದೆ.ಹಾಗಾಗಿ ಮಕ್ಕಳ ಮಾನಸಿಕ ಆರೋಗ್ಯಕ್ಕೆ ದೈಹಿಕ ಚಟುವಟಿಕೆಗಳು ಮುಖ್ಯವಾಗುತ್ತದೆ”ಎಂದು ಹೇಳಿದರು.
ಮೊಳಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ್ ಶೆಟ್ಟಿ ಮಾತನಾಡಿ”ಮಕ್ಕಳಲ್ಲಿ ಕ್ರಿಯಾಶೀಲತೆ ಮೂಡಿಸಿ ಹೊಸ ಚೈತನ್ಯ ತುಂಬಲು ಬೇಸಿಗೆ ಶಿಬಿರಗಳು ಉತ್ತಮ ಆಯ್ಕೆಯಾಗುತ್ತವೆ.ಮಕ್ಕಳು ಓದುವಿಗೆ ಪ್ರಾಮುಖ್ಯತೆ ಕೊಡುವ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಂಡಾಗ ಸೃಜನಶೀಲವಾಗಿ ಚಿಂತಿಸಲು ಸಾಧ್ಯವಾಗುತ್ತದೆ”ಎಂದರು.


ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ, ಮುಖ್ಯೋಪಾಧ್ಯಾಯರಾದ ಪ್ರದೀಪ್ ಕೆ.ಉಪಸ್ಥಿತರಿದ್ದರು.


ಈ ದಿನದ ವಿಶೇಷತೆ:
ಸಾಹಸ ಆಟಗಳನ್ನು ಒಳಗೊಂಡ ಬೂಟ್ ಕ್ಯಾಂಪ್ ನಲ್ಲಿ ಪಿಸ್ತೂಲ್ ಮತ್ತು ಬಂದೂಕು ಶೂಟಿಂಗ್, ಬಿಲ್ಲುಗಾರಿಕೆ,ಮಂಕಿ ಬ್ರಿಡ್ಜ್,ಕಮಾಂಡೋ ಬ್ರಿಡ್ಜ್,ಸಿಂಗಲ್ ರೋಪ್ ಬ್ಯಾಲೆನ್ಸ್, ಮಂಕಿ ಸ್ವಿಂಗ್,ಮೈಂಡ್ ಗೇಮ್, ಟೈಯರ್ ಕ್ಲೈಂಬಿಂಗ್,ಟೈಯರ್ ವೆಲ್,ಮನರಂಜನೆಯ ಆಟ ಮುಂತಾದ 15ಕ್ಕೂ ಹೆಚ್ಚು ಸಾಹಸ ಆಟಗಳ ಚಟುವಟಿಕೆ ಹಾಗೂ ನೃತ್ಯ ತರಬೇತಿ ನಡೆಯಿತು.