




ಡೈಲಿ ವಾರ್ತೆ: 28/ಏಪ್ರಿಲ್/2025


ನಡು ರಸ್ತೆಯಲ್ಲಿ ಕಾಲೇಜು ಪ್ರಾಧ್ಯಾಪಕನ ಮೇಲೆ ಹಲ್ಲೆ: ಮೂವರ ಬಂಧನ
ಬೆಂಗಳೂರು: ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಸಮೀಪದ ಜೆಹೆಚ್ ಬಿಸಿ ಲೇಔಟ್ನಲ್ಲಿ ಕಾಲೇಜು ಪ್ರಾಧ್ಯಾಪಕ ಅರಬಿಂದ್ ಗುಪ್ತಾ ಎಂಬವರ ಮೇಲೆ ಯುವಕರು ಹಲ್ಲೆ ನಡೆಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ವಿಂಗ್ ಕಮಾಂಡರ್ ರೋಡ್ ರೇಜ್ ಪ್ರಕರಣ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಸಂದರ್ಭದಲ್ಲೇ ಈ ಘಟನೆಯೂ ನಡೆದಿದೆ.
ಏಪ್ರಿಲ್ 21 ರಂದು ಸಂಜೆ 6 ರಿಂದ 7 ಗಂಟೆಯ ಸಮಯದಲ್ಲಿ ಕುಮಾರಸ್ವಾಮಿ ಲೇಔಟ್ನ ಜೆಹೆಚ್ ಬಿಸಿ ಲೇಔಟ್ನಲ್ಲಿ ಖಾಸಗಿ ಕಾಲೇಜು ಪ್ರಾಧ್ಯಾಪಕ ಅರಬಿಂದ್ ಗುಪ್ತಾ ಬೈಕ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಆಟೋದಲ್ಲಿ ತೆರಳುತ್ತಿದ್ದ ಮೂವರು ಯುವಕರು, ತಿಂಡಿ ತಿಂದು ಕಸವನ್ನು ರಸ್ತೆ ಮೇಲೆಯೇ ಬಿಸಾಡಿದ್ದರು. ಆ ವೇಳೆ, ಪ್ರಾಧ್ಯಾಪಕ ಅರಬಿಂದ್ ಗುಪ್ತಾ ಇದನ್ನು ಪ್ರಶ್ನಿಸಿದ್ದರು. ಕಸ ರಸ್ತೆ ಮೇಲೆ ಕಸ ಬಿಸಾಡಬೇಡಿ ಎಂದಿದ್ದರು. ಇದರಿಂದ ಕೋಪಗೊಂಡ ಯುವಕರು ಪ್ರಾಧ್ಯಾಪಕನ ಮೇಲೆ ಹಲ್ಲೆ ನಡೆಸಿದ್ದರು.
ಘಟನೆಯ ವೀಡಿಯೋ ಮಾಡಿದ್ದ ಅರಬಿಂದ್ ಗುಪ್ತಾ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಬೈಯಪ್ಪನಹಳ್ಳಿಯಲ್ಲಿ ನಡೆದಿದ್ದ ರೋಡ್ ರೇಜ್ ಬಳಿಕ (ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಪ್ರಕರಣ) ಇದು ಕೂಡ ಸಾಕಷ್ಟು ಸದ್ದು ಮಾಡಿತ್ತು.
ನಂತರ ಪ್ರಕರಣ ದಾಖಲಿಸಿಕೊಂಡಿದ್ದ ಕೆಎಸ್ ಲೇಔಟ್ ಪೊಲೀರು ಮೂವರು ಆರೋಪಿಗಳಾದ ಭಾನುಪ್ರಸಾದ್, ಶರತ್, ಅಮೃತ್ ಕುಮಾರ್ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಸದ್ಯ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿರಿಸಲಾಗಿದೆ.