ಡೈಲಿ ವಾರ್ತೆ: 28/ಏಪ್ರಿಲ್/2025

ಕೀರ್ತಿಶೇಷ ಶ್ರೀ ಶಿರಿಯಾರ ಮಂಜು ನಾಯ್ಕ ಜನ್ಮ ಶತವರ್ಷ ಸಂಭ್ರಮ

ಕೋಟ: ಯಕ್ಷಗಾನ ಕಲೆಯ ಉಳಿವಿಗೆ ಅನೇಕ ಹಿರಿಯ ಕಲಾವಿದರು ಶ್ರಮಪಟ್ಟಿದ್ದಾರೆ. ಅಂತಹ ಹಿರಿಯ ಕಲಾವಿದರಲ್ಲಿ ಶಿರಿಯಾರ ಮಂಜು ನಾಯ್ಕ ಓರ್ವರು. ಅವರಂತಹ ಹಿರಿಯವರ ಸಾಧನೆಯನ್ನು ನೆಪಿಸುವ ಸಲುವಾಗಿ ಇಂತಹ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು ಎಂದು ಡಾ. ಜಿ. ಶಂಕರ್ ಪ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಜಿ.ಶಂಕರ್ ನುಡಿದರು.
ಅವರು ಯಕ್ಷಗಾನ ಕಲಾವಿದ ಶಿರಿಯಾರ ಮಂಜು ನಾಯ್ಕ ಜನ್ಮ ಶತವರ್ಷ ಸಮಿತಿ ಆಶ್ರಯದಲ್ಲಿ ಎ.27ರಂದು ಶಿರಿಯಾರ ಜಿ. ಪ್ರಸಾದ್ ಕಾಂಚನ್ ಅವರ ಮನೆಯ ಮುಂಭಾಗದಲ್ಲಿ ಜರಗಿದ ಶಿರಿಯಾರ ಮಂಜು ನಾಯ್ಕ ಜನ್ಮ ಶತಮಾನೋತ್ಸವ ಕಾರ್‍ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಯಕ್ಷಗಾನ ಕ್ಷೇತ್ರ ಇಂದು ಸಾಕಷ್ಟು ಬೆಳೆದಿದೆ. ಕಲೆ-ಕಲಾವಿದರಿಗೆ ನೀಡುವ ಗೌರವ ಇನ್ನಷ್ಟು ಹೆಚ್ಚಬೇಕು ಎಂದರು.
ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಮಾತನಾಡಿ ಕಲಾವಿದರು ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡಬೇಕು. ರಾತ್ರಿ ಸಂಚಾರದಲ್ಲೂ ಜಾಗೃತೆ ವಹಿಸಬೇಕು. ಆರೋಗ್ಯ ಚಿಕಿತ್ಸೆಗೆ ಸಂಬಂಧಿಸಿ ವಿಮೆಯನ್ನು ಮಾಡಿಕೊಳ್ಳಬೇಕು ಎಂದು ನುಡಿದರು.

ಶತವರ್ಷ ಸಮಿತಿಯ ಅಧ್ಯಕ್ಷ ಜಯರಾಮ ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶಿರಿಯಾರ ಸಹವರ್ತಿ ಕಲಾವಿದರಾದ ಕೊಳ್ಳೂರು ರಾಮಚಂದ್ರ ರಾವ್, ಆರ್ಗೋಡು ಮೋಹನದಾಸ ಶೆಣೈ, ತೀರ್ಥಹಳ್ಳಿ ಗೋಪಾಲ ಆಚಾರ್ಯ, ನರಾಡಿ ಭೋಜರಾಜ ಶೆಟ್ಟಿ, ಹಳ್ಳಾಡಿ ಜಯರಾಮ ಶೆಟ್ಟಿ, ಶೀನ ಕುಲಾಲ್ ಗಾವಳಿ, ಭಾಸ್ಕರ ಜೋಷಿ ಶಿರಳಗಿ, ಎಂ.ಎ. ನಾಯ್ಕ, ರಾಜೀವ ಶೆಟ್ಟಿ ಹೊಸಂಗಡಿ, ಬೇಗಾರ್ ಪದ್ಮನಾಭ, ಜಮದಗ್ನಿ ಶೀನ ನಾಯ್ಕ, ಸದಾಶಿವ ಅಮೀನ್, ಕೋಟ ಸುರೇಶ್, ಕಟ್‌ಬೆಲ್ತೂರು ರಮೇಶ್, ಹೊಳ್ಮಗೆ ನಾಗಪ್ಪ, ಎಳ್ಳಂಪಳ್ಳಿ ಜಗನ್ನಾಥ ಆಚಾರ್ಯ, ಹಳ್ಳಾಡಿ ಕೃಷ್ಣ, ಶಿರಿಯಾರ ಕುಟುಂಬದ ಕುಡಿ ನಡೂರು ದಿನಕರ ಅವರನ್ನು ಸಮ್ಮಾನಿಸಲಾಯಿತು.

ನಾಡೋಜ ಡಾ| ಜಿ. ಶಂಕರ್, ಆನಂದ ಸಿ. ಕುಂದರ್, ಸಾಲಿಗ್ರಾಮ ಮೇಳದ ಯಜಮಾನ ಪಳ್ಳಿ ಕಿಶನ್ ಹೆಗ್ಡೆ, ಕಂದಾವರ ರಘುರಾಮ ಶೆಟ್ಟಿ, ಪ್ರೊ| ಎಸ್.ವಿ. ಉದಯ ಕುಮಾರ್ ಶೆಟ್ಟಿ ಅವರಿಗೆ ಗೌರವ ಸಲ್ಲಿಸಲಾಯಿತು.
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ, ಮೆಕ್ಕೆಕಟ್ಟು ನಂದಿಕೇಶ್ವರ ದೇವಸ್ಥಾನದ ಮೊಕ್ತ್ತೇಸರ ಕಿಶನ್ ಹೆಗ್ಡೆ ಕೊಳ್ಕೆಬೈಲು, ಶಿರಿಯಾರ ಗ್ರಾ.ಪಂ. ಅಧ್ಯಕ್ಷ ಸುಧೀಂದ್ರ ಶೆಟ್ಟಿ, ಹಿರಿಯರಾದ ಶೇಡಿಕೊಡು ವಿಠಲ ಶೆಟ್ಟಿ, ಎಸ್.ವಿ. ಉದಯ ಕುಮಾರ್ ಶೆಟ್ಟಿ, ಮೊಗವೀರ ಯುವ ಸಂಘಟನೆ ಅಧ್ಯಕ್ಷ ಜಯಂತ್ ಅಮೀನ್, ಬಾರ್ಕೂರು ಮಹಾಸಭಾದ ಸತೀಶ್ ಅಮೀನ್ ಬಾರ್ಕೂರು, ಶತವರ್ಷ ಸಮಿತಿ ಉಪಾಧ್ಯಕ್ಷ ಆನಂದ ಮರಕಾಲ ಉಪಸ್ಥಿತರಿದ್ದರು.

ಸಮಿತಿಕಾರ್ಯದರ್ಶಿ ರಮೇಶ್ ಮಂಜು ಸ್ವಾಗತಿಸಿ, ಸಮಿತಿ ಖಜಾಂಚಿ ಜಿ. ಪ್ರಸಾದ್ ಕಾಂಚನ್ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಶಶಿಧರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ಜನ್ಸಾಲೆ ‘ಸುಧನ್ವಾರ್ಜುನ’ ಯಕ್ಷಗಾನ ಪ್ರದರ್ಶನ ನಡೆಯಿತು.
ರಾತ್ರಿ ಶ್ರೀ ಗುರು ಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ ಇವರಿಂದ ‘ಶುಭಲಕ್ಷಣ’ ಯಕ್ಷಗಾನ ನಡೆಯಿತು.