




ಡೈಲಿ ವಾರ್ತೆ: 28/ಏಪ್ರಿಲ್/2025


ಕೋಟ ಗ್ರಾಮ ಪಂಚಾಯತ್ ನಲ್ಲಿ ವಿಶ್ವಕರ್ಮ ಯೋಜನೆಯ ಉಚಿತ ಸಲಕರಣೆ ವಿತರಣೆ

ಕೋಟ; ವಿವಿಧ ಸಮುದಾಯದ ಕಸುಬುಗಳಿಗೆ ಆಧರಿಸಿ ಸ್ವ ಉದ್ಯೋಗಕ್ಕೆ ಉತ್ತೇಜನ ನೀಡುವ ದೃಷ್ಟಿಯಲ್ಲಿ ಉಡುಪಿ ಜಿಲ್ಲೆಯಲ್ಲಿ 6,890 ಮಂದಿ ವಿಶ್ವಕರ್ಮ ಯೋಜನಯಡಿ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 6,120ಮಂದಿಗೆ ತರಭೇತಿ ನೀಡಲಾಗಿದ್ದು, ತರಭೇತಿ ಪಡೆದ 3,153 ಮಂದಿಗೆ ಒಟ್ಟು ಸಾಲ 53,64,95,000 ರೂಪಾಯಿ ಮಂಜೂರಾತಿಗೊಂಡಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಸೋಮವಾರ ಕೋಟ ಅಂಚೆ ಕಛೇರಿಯಲ್ಲಿ ನಡೆದ ಭಾರತ ಸರಕಾರದ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಉಚಿತ ಸಲಕರಣೆ ವಿತರಣಾ ಸಮಾರಂಭದಲ್ಲಿ ಉಚಿತ ಸಲಕರಣೆ ವಿತರಿಸಿ ಮಾತನಾಡಿದರು.

ಕುಂದಾಪುರದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಸ್ವ ಉದ್ಯೋಗಕ್ಕೆ ವಿಶ್ವಕರ್ಮ ಯೋಜನೆ ವರವಾಗಲಿದ್ದು, ಫಲಾನುಭವಿಗಳು ಸರಕಾರದ ಯೋಜನೆಗಳ ಸದುಪಯೋಗಪಡಿಸಿಕೊಂಡು ಸಧೃಢವಾಗಿ ಬೆಳೆಯಬೇಕು ಎಂದರು.

ಈ ಸಂದರ್ಭದಲ್ಲಿ ಸಂಸದರ ಆಪ್ತ ಸಹಾಯಕ ಹರೀಶ್ ಕುಮಾರ್ ಶೆಟ್ಟಿ ಮಾತನಾಡಿ ವಿಶ್ವಕರ್ಮ ಯೋಜನೆಯ ಪಲಾನುಭವಿಗಳಿಗೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಮಾನ್ಯ ಜನರಿಗೆ ಸಾಲ ಪಡೆಯಲು “ಸಿಬಿಲ್ ಸ್ಕೋರ್” ತೊಡಕು ಇರುವುದನ್ನು ಗಮನಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು RBI ಗವರ್ನರ್ ಗೆ ಮನವಿ ಸಲ್ಲಿಸಿದ್ದು.
ಅವರ ಮನವಿಗೆ ಸ್ಪಂದಿಸಿದ ಆರ್‌ಬಿಐ ಗವರ್ನರ್ ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸೂಚನೆ ನೀಡಿ ವಿಶ್ವಕರ್ಮ ಯೋಜನೆಯ ಅಡಿಯ ಸಾಲದಲ್ಲಿ ಸಿವಿಲ್ ಸ್ಕೋರ್ ಅನ್ನು ಕೇಳದೆ ಸಾಲ ನೀಡಬೇಕೆಂದು ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸುತ್ತೋಲೆಯನ್ನು ಹೊರಡಿಸುತ್ತಾರೆ.
ಸಂಸದರ ಮನವಿಗೆ ಪ್ರತಿಕ್ರಿಯಿಸಿ ರಾಷ್ಟ್ರಾದಾದ್ಯಂತ ವಿಶ್ವಕರ್ಮ ಯೋಜನೆಯಲ್ಲಿ ಸಿಬಿಲ್ ಸ್ಕೋರ್ ಸಮಸ್ಯೆ ಪರಿಹಾರ ಮಾಡಿದ್ದಕ್ಕಾಗಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರು ಭಾರತ ಸರ್ಕಾರದ ಹಣಕಾಸು ಸಚಿವಾಲಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಕೋಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿಭರತ್ ಶೆಟ್ಟಿ ವಹಿಸಿದ್ದರು.
ವೇದಿಕೆಯಲ್ಲಿ ಕೋಟ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಾಂಡು ಪೂಜಾರಿ ಕುಂದಾಪುರ ಅಂಚೆ ನಿರೀಕ್ಷಕ ನಾಗಾಂಜನೇಯಲು, ಕೋಟ ಜ್ಞಾನ ಚೇತನ ಕಂಪ್ಯೂಟರ್ ಅಕಾಡೆಮಿಯ ಮುಖ್ಯಸ್ಥ ಚೇತನ್ ಎಂ. ಉಪಸ್ಥಿತರಿದ್ದರು.
ಗಿಳಿಯಾರು ಗ್ರಾಮದ ಶ್ರೀನಿವಾಸ ಆಚಾರ್, ಮಣೂರು ಗ್ರಾಮದ ದಿನೇಶ್ ಆಚಾರ್, ಕೋಟ ಗ್ರಾಮದ ದೀಪಕ್ ಆಚಾರ್, ಚಂದ್ರ ಆಚಾರ್, ನಾಗೇಂದ್ರ ಆಚಾರ್, ಇವರಿಗೆ ಕಾರ್ಪೇಂಟರ್ ಸಲಕರಣೆಯನ್ನು ವಿತರಿಸಲಾಯಿತು. ಗಿಳಿಯಾರು ಗ್ರಾಮದ ಗಣೇಶ್ ಮೆಂಡನ್, ಸಂಗೀತ,ಪ್ರವೀಣ, ಕೋಟತಟ್ಟು ಗ್ರಾಮ ರವೀಂದ್ರ, ಶೈಲಾ ಇವರಿಗೆ ಭಾಸ್ಕೆಟ್ ಮೆಕರ್ ಸಲಕರಣೆ ನೀಡಲಾಯಿತು. ಕೋಟ ಅಂಚೆ ಕಚೇರಿಯ ಜಯಪ್ರಕಾಶ್ ಸ್ವಾಗತಿಸಿದರು.
ಸಂಸದರ ಆಪ್ತ ಸಹಾಯಕ ಹರೀಶ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕೋಟ ಗ್ರಾಮ ಪಂಚಾಯಿತಿಯ ಸಿಬ್ಬಂದಿ ಶೇಖರ್ ಕಾರ್ಯಕ್ರಮ ವಂದಿಸಿದರು.