



ಡೈಲಿ ವಾರ್ತೆ: 05/MAY/2025


ಪೂಂಚ್ನಲ್ಲಿ ಉಗ್ರರ ಅಡಗುತಾಣ ಪತ್ತೆ, ಐದು ಐಇಡಿಗಳು ವಶಕ್ಕೆ

ಪೂಂಚ್: ಜಮ್ಮು ಮತ್ತು ಕಾಶ್ಮೀರದ ಪೂಂಚ್ನಲ್ಲಿ ಉಗ್ರರ ಅಡಗುತಾಣ ಪತ್ತೆಯಾಗಿದ್ದು, ಐದು ಐಇಡಿ (ಸುಧಾರಿತ ಸ್ಫೋಟಕ ಸಾಧನ)ಗಳನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿವೆ. ಪಹಲ್ಗಾಮ್ನಲ್ಲಿ ಉಗ್ರರು ನಡೆಸಿದ ದಾಳಿ ಬಳಿಕ ಭಯೋತ್ಪಾದಕರಿಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ. ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿ ಶೋಧ ಕಾರ್ಯಾಚರಣೆಯಲ್ಲಿ ಪೂಂಚ್‌ನ ಸುರಂಕೋಟೆ ಅರಣ್ಯ ಪ್ರದೇಶದಲ್ಲಿ ಅಡಗುತಾಣವನ್ನು ಪತ್ತೆಹಚ್ಚಿದ್ದಾರೆ. ಮೂಲಗಳು ತಿಳಿಸಿರುವಂತೆ, ಟಿಫಿನ್ ಬಾಕ್ಸ್‌ಗಳಲ್ಲಿ ಮೂರು ಮತ್ತು ಸ್ಟೀಲ್ ಬಕೆಟ್‌ಗಳಲ್ಲಿ ಎರಡು ಐಇಡಿಗಳನ್ನು ಮರೆಮಾಡಲಾಗಿತ್ತು.
ಭದ್ರತಾ ಪಡೆಗಳು ಸ್ಥಳದಿಂದ ಸಂವಹನ ಸಾಧನಗಳು ಮತ್ತು ಇತರ ಅಪರಾಧ ಸಾಮಗ್ರಿಗಳನ್ನು ವಶಪಡಿಸಿಕೊಂಡವು. ಅಧಿಕಾರಿಗಳು ಕಣಿವೆಯಾದ್ಯಂತ ದೊಡ್ಡ ಪ್ರಮಾಣದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದ್ದಾರೆ. ಶಂಕಿತ ಅಡಗುತಾಣಗಳ ಮೇಲೆ ದಾಳಿ ಮಾಡಿದ್ದಾರೆ, ಭಯೋತ್ಪಾದಕರು ಬಳಸುತ್ತಿದ್ದ ಆಶ್ರಯಗಳನ್ನು ಧ್ವಂಸ ಮಾಡಿದ್ದಾರೆ ಮತ್ತು ನೂರಾರು ಭಯೋತ್ಪಾದಕ ಸಹಚರರನ್ನು ವಿಚಾರಣೆಗಾಗಿ ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಾದ್ಯಂತ ಭದ್ರತಾ ಪಡೆಗಳು ಭಯೋತ್ಪಾದಕರ ಸಹಾಯಕರು ಮತ್ತು ಬೆಂಬಲಿಗರನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ಹಲವಾರು ಕಾರ್ಯಾಚರಣೆಗಳಲ್ಲಿ ಪೂಂಚ್‌ನ ಕಾರ್ಯಾಚರಣೆಯೂ ಸೇರಿದೆ.
ಏಪ್ರಿಲ್ 22 ರಂದು, ಅನಂತ್‌ನಾಗ್ ಜಿಲ್ಲೆಯ ಪಹಲ್ಗಾಮ್ ಬಳಿಯ ಜನಪ್ರಿಯ ಪ್ರವಾಸಿ ತಾಣವಾದ ಬೈಸರನ್‌ನಲ್ಲಿ ಭಯೋತ್ಪಾದಕರು ಗುಂಡು ಹಾರಿಸಿ 26 ಜನರನ್ನು ಹತ್ಯೆ ಮಾಡಿದ್ದರು. ಅವರಲ್ಲಿ ಹೆಚ್ಚಿನವರು ಇತರ ರಾಜ್ಯಗಳ ಪ್ರವಾಸಿಗರು. ಈ ದಾಳಿಯು ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸಿದೆ.
ಪ್ರಧಾನಿ ನರೇಂದ್ರ ಮೋದಿ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ಪ್ರತೀಕಾರ ತೀರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ . ಉಗ್ರರನ್ನು ಹಿಂಬಾಲಿಸಿ ಹೊಡೆದುರುಳಿಸುತ್ತೇವೆ ಎಂದಿದ್ದಾರೆ. ಪಹಲ್ಗಾಮ್ ಶೈಲಿಯ ಹತ್ಯಾಕಾಂಡ ಪುನರಾವರ್ತನೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ, ಭದ್ರತಾ ಪಡೆಗಳು ಗುಪ್ತಚರ ಸಂಗ್ರಹಣೆ ಮತ್ತು ಭೂ ಕಾರ್ಯಾಚರಣೆಗಳನ್ನು ಚುರುಕುಗೊಳಿಸಿವೆ. ಹಾಗೆಯೇ ಜಮ್ಮುವಿನ ಜೈಲುಗಳಲ್ಲಿ ಸಂಭಾವ್ಯ ದಾಳಿ ನಡೆಯುವ ಎಚ್ಚರಿಕೆ ದೊರೆತಿದ್ದು, ಭದ್ರತೆ ಹೆಚ್ಚಿಸಲಾಗಿದೆ.