



ಡೈಲಿ ವಾರ್ತೆ: 05/MAY/2025


ಪಾಕಿಸ್ತಾನದ ಬುಡಕ್ಕೆ `ಜಲ’ಬಾಂಬ್ ಹಾಕಿದ ಭಾರತ!
2 ಡ್ಯಾಂನ ಎಲ್ಲಾ ಗೇಟ್ ಬಂದ್

ಶ್ರೀನಗರ: ಪಹಲ್ಗಾಮ್ ಭೀಕರ ನರಮೇಧಕ್ಕೆ ಪ್ರತಿಯಾಗಿ ಭಾರತ ಈಗ ಪಾಕಿಸ್ತಾನದ ಬುಡಕ್ಕೆ `ಜಲ’ಬಾಂಬ್ ಹಾಕಿದೆ. ಸಿಂಧೂ ನದಿಯ ಒಪ್ಪಂದವನ್ನು ಭಾರತ ಅಮಾನತಿನಲ್ಲಿಟ್ಟ ಬೆನ್ನಲ್ಲೇ ಚೆನಾಬ್ ನದಿಗೆ ಜಲಾಶಯಗಳಿಂದ ನೀರು ಹರಿಸುವುದನ್ನೇ ನಿಲ್ಲಿಸಿದೆ.
ಚೆನಾಬ್ ನದಿಗೆ ಅಡ್ಡಲಾಗಿ ರಾಮಬನದಲ್ಲಿ ಬಾಗ್ಲಿಹಾರ್ ಮತ್ತು ರಿಯಾಸಿಯಲ್ಲಿ ಸಲಾಲ್ ಜಲವಿದ್ಯುತ್ ಅಣೆಕಟ್ಟುಗಳನ್ನು ನಿರ್ಮಾಣ ಮಾಡಲಾಗಿದೆ. ಈಗ ಈ ಎರಡು ಅಣೆಕಟ್ಟಿನಿಂದ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಝೀಲಂ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಿಶನ್‌ಗಂಗಾ ಅಣೆಕಟ್ಟಿನಿಂದಲೂ ನೀರು ಹರಿಸುವುದನ್ನು ನಿಲ್ಲಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ.
ಇಂದು ಬೆಳಗ್ಗೆ ಬಾಗ್ಲಿಹಾರ್ ಅಣೆಕಟ್ಟಿನ ಗೇಟ್‌ಗಳನ್ನು ಮುಚ್ಚಿದ್ದರಿಂದ ನೀರಿನ ಹರಿವು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಇದರೊಂದಿಗೆ ರಾಮಬನ್‌ನಲ್ಲಿರುವ ಚೆನಾಬ್ ನದಿ ಪಾತ್ರ ಮತ್ತು ಜಲಾಶಯದ ಕೆಳಭಾಗದ ಸಂಪೂರ್ಣವಾಗಿ ಬತ್ತಿ ಹೋದಂತೆ ಕಾಣುತ್ತಿದೆ.
ರಿಯಾಸಿಯಲ್ಲಿರುವ ಸಲಾಲ್ ಅಣೆಕಟ್ಟಿನಿಂದ ನೀರಿನ ಹರಿವು ಕಡಿಮೆಯಾಗಿದೆ ಮತ್ತು ಅಖ್ನೂರ್ ಮತ್ತು ಜೌರಿಯನ್‌ನಲ್ಲಿ ನೀರಿನ ಮಟ್ಟವೂ ಗಣನೀಯವಾಗಿ ಕಡಿಮೆಯಾಗಿದೆ. ಇದರಿಂದಾಗಿ ಪಾಕಿಸ್ತಾನದಲ್ಲಿ ನೀರಿನ ಬಿಕ್ಕಟ್ಟನ್ನು ಉಲ್ಬಣಗೊಳ್ಳುವ ಸಾಧ್ಯತೆಯಿದೆ.
ಅಖ್ನೂರ್ ಪ್ರದೇಶದಲ್ಲಿ ನೀರಿನ ಮಟ್ಟ ಭಾರೀ ಇಳಿಕೆಯಾಗಿದ್ದು ಜನರು ಮೊದಲ ಬಾರಿಗೆ ನದಿಯನ್ನು ದಾಟುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.