ಡೈಲಿ ವಾರ್ತೆ: 05/MAY/2025

ಕೋಟ| ಕಾವಡಿ ಗ್ರಾಮದಲ್ಲಿ ಮಲ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದ ವಿರುದ್ಧ ಪ್ರತಿಭಟನೆ

ಕೋಟ:ಬ್ರಹ್ಮಾವರ ತಾಲೂಕಿನ ಕೋಟ ಹೋಬಳಿಯ ವಡ್ಡರ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾವಡಿ ಗ್ರಾಮದಲ್ಲಿ ಮಲ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದ ವಿರುದ್ಧ ಕಾವಡಿ ನಾಗರಿಕ ಹಿತರಕ್ಷಣಾ ಹೋರಾಟ ಸಮಿತಿ ವತಿಯಿಂದ ಪ್ರತಿಭಟನಾ ಸಭೆ ಸೋಮವಾರ ಕಾವಡಿ ಪ್ರಾಥಮಿಕ ಉಪಕೇಂದ್ರದ ಸಮೀಪ ನಡೆಯಿತು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಹೋರಾಟ ಸಮಿತಿಯ ಪ್ರಮುಖರಾದ ಉದಯಶ್ಚಂದ್ರ ಶೆಟ್ಟಿ ಘಟಕ ನಿರ್ಮಾಣಕ್ಕೆ ಗ್ರಾಮಸ್ಥರ ಪರವಾಗಿ ಆಕ್ಷೇಪ ವ್ಯಕ್ತಪಡಿಸಿ ಗ್ರಾಮವು ತನ್ನದೇ ಆದ ನೈಸರ್ಗಿಕ ಸೌಂದರ್ಯವನ್ನು ಹೊಂದಿದೆ ಇಲ್ಲಿಯ ಶೇಕಡ 9೦% ಭಾಗ ಜನರು ಹೆಚ್ಚಾಗಿ ಕೃಷಿ ಹಾಗೂ ಹೈನುಗಾರಿಕೆಯನ್ನು ಅವಲಂಬಿತರಾಗಿದ್ದಾರೆ.

ಇಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯನ್ನು ಹೊಂದಿದ್ದು, ಜನನಿಬಿಡರು ವಸತಿಯನ್ನು ಹೊಂದಿದ್ದು, ಅಂಗನವಾಡಿ ಕೇಂದ್ರ, ಸಮುದಾಯ ಆರೋಗ್ಯ ಉಪಕೇಂದ್ರ ಮತ್ತು ಶತಮಾನಕ್ಕೂ ಹಳೆಯದಾದ ದೇವಸ್ಥಾನ, ದೈವಸ್ಥಾನ, ಹಾಗೂ ಗರಡಿಯನ್ನು ಹೊಂದಿದ್ದು, ಇಲ್ಲಿಯ ಜನರು ಹೆಚ್ಚಾಗಿ ಬಾವಿ ಹಾಗೂ ಕೆರೆಯ ನೀರನ್ನು ಕೃಷಿ ಮಾಡಲು ಮತ್ತು ಕುಡಿಯುವ ಬಗ್ಗೆ ನೀರನ್ನು ಉಪಯೋಗಿಸುತ್ತಿದ್ದಾರೆ, ಹೀಗಿರುವಾಗ ಸಾರ್ವಜನಿಕರಿಗೆ ಯಾವುದೇ ಸದ್ದಿಲದೆ,ಮಲ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡುವ ವಿಚಾರ ಬೆಳಕಿಗೆ ಬಂದಿದೆ, ಇಂತಹ ಘಟಕ ನಿರ್ಮಾಣದಿಂದ ನಮ್ಮ ಗ್ರಾಮಕ್ಕೆ ಮಲೇರಿಯಾ, ಡೆಂಗ್ಯೂ, ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳಿಂದ ಚಿಕ್ಕ ಮಕ್ಕಳಿಗೆ, ವಯಸ್ಕರಿಗೆ, ಮಹಿಳೆಯರಿಗೆ ಆರೋಗ್ಯದಲ್ಲಿ ತೊಂದರೆಯಾಗುವ ಸಾಧ್ಯತೆ ಇದೆ, ಇದರ ವಾಸನೆಯಿಂದ ನಮ್ಮ ಗ್ರಾಮಸ್ಥರ ಆರೋಗ್ಯದ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರುವುದು ಖಂಡಿತ ಅದಲ್ಲದೇ ಕುಡಿಯುವ ನೀರಿಗಾಗಿ ಬಾವಿಯನ್ನು ಅವಲಂಬಿಸುವ ಕಾವಡಿ ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ.
ಇದನ್ನೆಲ್ಲ ಮನಗಂಡು ತಾವು ನಮ್ಮ ಗ್ರಾಮಕ್ಕೆ ಕಿಂಚಿತ್ತು ಅವಶ್ಯಕತೆಯಿಲ್ಲದ ಈ ಮಲತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡುವ ನಿರ್ಣಯವನ್ನು ಈ ಕೂಡಲೇ ಕೈಬಿಡಬೇಕು, ಕಾವಡಿ ಗ್ರಾಮ ಜನರ ನೆಮ್ಮದಿ ಕೆಡಿಸಲು ಮುಂದಾಗಬೇಡಿ, ಒಂದೊಮ್ಮೆ ಗ್ರಾಮಸ್ಥರ ಮನವಿ ಲಕಿಸದೆ ನಿರ್ಮಾಣ ಕಾರ್ಯಮಾಡಿದರೆ ಉಗ್ರಸ್ವರೂಪದ ಹೋರಾಟಕ್ಕಿಳಿಯಬೇಕಾದಿತು ಎಂದು ಸಭೆಯಲ್ಲಿ ಎಚ್ಚರಿಸಿದರು.

ಪಂಚಾಯತ್ ಅಧ್ಯಕ್ಷರ ಸ್ಪಷ್ಟೀಕರಣ:
ಪ್ರತಿಭಟನಾ ಸಭೆಯಲ್ಲಿ ಭಾಗಿಯಾದ ವಡ್ಡರ್ಸೆ ಗ್ರಾಮಪಂಚಾಯತ್ ಅಧ್ಯಕ್ಷ ಲೋಕೇಶ್ ಕಾಂಚನ್ ನಮ್ಮ ಗ್ರಾಮದಲ್ಲಿ ಇನ್ನೊಂದು ಭಾಗದ ಮಲವನ್ನು ತಂದು ಇಲ್ಲಿ ನಿರ್ವಹಣಾ ಘಟಕ ನಿರ್ಮಿಸುವ ಅಗತ್ಯವಿಲ್ಲ ಗ್ರಾಮಪಂಚಾಯತ್ ಗೆ ಮಾಹಿತಿ ಇಲ್ಲದೆ ಜಿಲ್ಲಾಧಿಕಾರಿಗಳ ಈ ತಿರ್ಮಾನಕ್ಕೆ ಜನಪ್ರತಿನಿಧಿಗಳಾಗಿ ಹಾಗೂ ಸ್ಥಳೀಯಾಡಳಿತ ಯಾವುದೇ ಸಮ್ಮತಿ ನೀಡುವುದಿಲ್ಲ ಜನರ ಭಾವನೆಗಳಿಗೆ ಬೆಲೆ ನೀಡಿ ಈ ಯೋಜನೆಯನ್ನು ಈಗಿಂದಿಲೇ ಕೈಬಿಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಡ್ಡರ್ಸೆ ಗ್ರಾಮಪಂಚಾಯತ್ ಸದಸ್ಯರಾದ ಉದಯ್ ಕುಲಾಲ್,ರೇಖಾ ಶರತ್ ಶೆಟ್ಟಿ,ಕುಶಲ ಶೆಟ್ಟಿ,ಮಾಜಿ ತಾ.ಪಂ ಸದಸ್ಯ ಉಲ್ಲಾಸ್ ಶೆಟ್ಟಿ, ನಾಗರಿಕ ಹಿತರಕ್ಷಣಾ ಹೋರಾಟ ಸಮಿತಿಯ ಪ್ರಮುಖರಾದ ಗೋಪಾಲಕೃಷ್ಣ ಕಾಂಚನ್, ಅಣ್ಣಪ್ಪ ಪೂಜಾರಿ ,ರಮೇಶ್ ರಾವ್, ಚಂದ್ರಶೇಖರ್ ಶೆಟ್ಟಿ,ಪ್ರಭಾಕರ್ ಶೆಟ್ಟಿ, ವಿಜಯ ಕುಮಾರ್ ಶೆಟ್ಟಿ,ಶರತ್ ಶೆಟ್ಟಿ,ಗುರುರಾಜ್ ಕಾಂಚನ್,ಜೀವನ್ ಕುಮಾರ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

ಮನವಿ ಸ್ವೀಕರಿಸಿದ ತಹಶೀಲ್ದಾರ್
ಮುಂಜಾನೆಯಿಂದ ಆರಂಭಗೊಂಡ ಪ್ರತಿಭಟನೆಯಲ್ಲಿ ಬ್ರಹ್ಮಾವರ ತಹಶಿಲ್ದಾರ್ ಶ್ರೀಕಾಂತ್ ಎಸ್ ಹೆಗ್ಡೆ ಆಗಮಿಸುತ್ತಿದ್ದಂತೆ ಪ್ರತಭಟನಾಕಾರರ ಘೋಷಣೆ ಮುಗಿಲುಮುಟ್ಟಿತು.ಈ ವೇಳೆ ಗ್ರಾಮಸ್ಥರ ಮನವಿ ಸ್ವೀಕರಿಸಿ ಈ ಮಾತನಾಡಿ ಘಟಕದ ಬಗ್ಗೆ ಈಗಾಲೇ ಸ್ಥಳ ಪರಿಶೀಲನೆ ಪೂರ್ವಗೊಂಡಿದೆ ಪ್ರಸ್ತುತ ನಿಮ್ಮ ಅಹವಾಲುಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗುವುದು ಮುಂದಿನ ಕ್ರಮಗಳನ್ನು ಅವರೇ ಕೈಗೊಳ್ಳಲಿದ್ದಾರೆ ಎಂದರು.