ಡೈಲಿ ವಾರ್ತೆ: 11/MAY/2025

ನಾಪತ್ತೆಯಾಗಿದ್ದ ಪದ್ಮಶ್ರೀ ಪುರಸ್ಕೃತ ಕೃಷಿ ವಿಜ್ಞಾನಿ ಸುಬ್ಬಣ್ಣ ಅಯ್ಯಪ್ಪನ್ ಶವವಾಗಿ ಪತ್ತೆ!

ಮಂಡ್ಯ: ಕೃಷಿ ವಿಜ್ಞಾನಿ, ಪದ್ಮಶ್ರೀ ಪುರಸ್ಕೃತ ಡಾ.ಸುಬ್ಬಣ್ಣ ಅಯ್ಯಪ್ಪನ್ (70) ಅವರ ಶವ ಜಿಲ್ಲೆಯ ಶ್ರೀರಂಗಪಟ್ಟಣದ ಸಾಯಿ ಆಶ್ರಮದ ಬಳಿ ಕಾವೇರಿ‌ ನದಿಯಲ್ಲಿ ಪತ್ತೆ ಆಗಿರುವಂತಹ ಘಟನೆ ನಡೆದಿದೆ. ಮೈಸೂರಿನ ಅಪಾರ್ಟ್ಮೆಂಟ್ ಒಂದರಲ್ಲಿ ಪತ್ನಿ ಜೊತೆಗೆ ವಾಸವಾಗಿದ್ದ ಡಾ.ಸುಬ್ಬಣ್ಣ ಅಯ್ಯಪ್ಪನ್ ​, ಮೇ 07 ರಂದು ಮನೆಯಿಂದ ನಾಪತ್ತೆಯಾಗಿದ್ದರು.

ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ಸದ್ಯ ಶ್ರೀರಂಗಪಟ್ಟಣ ಪೊಲೀಸರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ:
ಡಾ.ಸುಬ್ಬಣ್ಣ ಅಯ್ಯಪ್ಪನ್​ ಅವರು ಮೈಸೂರಿನ ವಿಶ್ವೇಶ್ವರ ನಗರ ಕೈಗಾರಿಕಾ ಪ್ರದೇಶದ ಅಕ್ಕಮಹಾದೇವಿ ರಸ್ತೆಯಲ್ಲಿ ವಾಸಿಸುತ್ತಿದ್ದರು. ಅವರ ಸ್ಕೂಟರ್ ನದಿಯ ದಡದಲ್ಲಿ ಪತ್ತೆಯಾಗಿದೆ. ಮೂರು ದಿನಗಳ ಹಿಂದೆ ಶ್ರೀರಂಗಪಟ್ಟಣದ ಸಾಯಿಬಾಬಾ ಆಶ್ರಮದ ಬಳಿ ನದಿಗೆ ಹಾರಿದ್ದಾರೆ ಎಂಬುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ರವಾನಿಸಲಾಗಿದೆ. ಅವರ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸ್​ ಅಧಿಕಾರಿಯೊಬ್ಬರು ಹೇಳಿದ್ದಾರೆ.

ನದಿ ದಡಕ್ಕೆ ಧ್ಯಾನಕ್ಕಾಗಿ ಹೋಗುತ್ತಿದ್ದರು: ವಕೀಲ ಶ್ರೀನಿಧಿ ಸುಬ್ಬಣ್ಣ ಅಯ್ಯಪ್ಪನ್ ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮಕ್ಕೆ ಮತ್ತು ಶ್ರೀರಂಗಪಟ್ಟಣದ ಕಾವೇರಿ ನದಿಯ ದಡಕ್ಕೆ ಧ್ಯಾನಕ್ಕಾಗಿ ಹೋಗುತ್ತಿದ್ದರು. ದುರದೃಷ್ಟವಶಾತ್, ಅವರ ದೇಹವು ನದಿಯಲ್ಲಿ ಪತ್ತೆಯಾಗಿದೆ ಎಂದು ಅವರ ಸಂಬಂಧಿ ಮತ್ತು ವಕೀಲ ಶ್ರೀನಿಧಿ ಎಂಬುವವರು ಹೇಳಿದ್ದಾರೆ.