



ಡೈಲಿ ವಾರ್ತೆ: 13/MAY/2025


ವಾಹನ ತಪಾಸಣೆ ವೇಳೆ ಲಾರಿ ಡಿಕ್ಕಿ: ಪೊಲೀಸ್ ಸಿಬ್ಬಂದಿ ಸಾವು, ಚಾಲಕನ ಬಂಧನ

ದಾವಣಗೆರೆ: ಕರ್ತವ್ಯ ನಿಮಿತ್ತ ಲಾರಿ ನಿಲ್ಲಿಸಲು ಯತ್ನಿಸಿದ ಪೊಲೀಸ್ ಸಿಬ್ಬಂದಿ ಮೇಲೆ ಚಾಲಕ ಲಾರಿ ಹತ್ತಿಸಿದ ಪರಿಣಾಮ ಪೊಲೀಸ್ ಕಾನ್ಸ್ಟೇಬಲ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದಾವಣಗೆರೆ ತಾಲೂಕಿನ ಹೆಬ್ಬಾಳ ಟೋಲ್ ಗೇಟ್ ಬಳಿ ನಡೆದಿದೆ.
ಡಿಎಆರ್ ಕಾನ್ಸ್ಟೇಬಲ್ ರಾಮಪ್ಪ ಪೂಜಾರ್ ಸಾವನ್ನಪ್ಪಿದ ಸಿಬ್ಬಂದಿ.
ಹೆಬ್ಬಾಳ ಟೋಲ್ ಗೇಟ್ ಬಳಿ ಡಿಎಆರ್ ಪೊಲೀಸ್ ಕಾನ್ಸ್ಟೇಬಲ್ ರಾಮಪ್ಪ ಪೂಜಾರ್ ಸಂಚಾರಿ ಪೊಲೀಸರೊಂದಿಗೆ ಲಾರಿ ನಿಲ್ಲಿಸಲು ಯತ್ನಿಸಿದ್ದಾರೆ. ಈ ವೇಳೆ, ಅತಿ ವೇಗದಲ್ಲಿ ಇದ್ದ ಲಾರಿ ಸಿಬ್ಬಂದಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ, ಚಾಲಕನನ್ನು ಹಿಡಿಯವ ಪ್ರಯತ್ನ ನಡೆಸಲಾಯಿತಾದರೂ ಆತ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಚಾಲಕನ ಬಂಧನ: ಅತಿವೇಗ ಮತ್ತು ನಿರ್ಲಕ್ಷ್ಯತನದ ಮೂಲಕ ಲಾರಿ ಚಲಾಯಿಸಿ ಪೊಲೀಸ್ ಸಿಬ್ಬಂದಿ ಸಾವಿಗೆ ಕಾರಣನಾದ ಆರೋಪಿಯನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಮೂಲದ ಸುರೇಶ್ ಎಂದು ಗುರುತಿಸಲಾಗಿದೆ.
ಐಜಿಪಿ ಹಾಗೂ ಎಸ್ಪಿ ಉಮಾಪ್ರಶಾಂತ್ ಭೇಟಿ: ಘಟನೆ ಮಾಹಿತಿ ಬೆನ್ನಲ್ಲೇ ಎಸ್ಪಿ ಉಮಾಪ್ರಶಾಂತ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನಾ ಸ್ಥಳವಾಗಿರುವ ಟೋಲ್ ಗೇಟ್ ಬಳಿ ಯಾವುದೇ ಸಿಸಿಟಿವಿ ಕ್ಯಾಮರಾ ಅಳವಡಿಸದೇ ಇರುವ ಹಿನ್ನಲೆ ಎಸ್ಪಿ ಅಲ್ಲಿನ ಟೋಲ್ ಆಡಳಿತ ಹಾಗೂ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು.
ಖಾಸಗಿ ಆಸ್ಪತ್ರೆಯ ಶವಾಗಾರದಲ್ಲಿ ಮೃತರ ದೇಹ ಇಡಲಾಗಿದ್ದು, ಸ್ಥಳಕ್ಕೆ ಐಜಿಪಿ ರವಿಕಾಂತೇ ಗೌಡ ಅವರು ಭೇಟಿ ನೀಡಿದರು. ಮೃತ ಪೊಲೀಸ್ ಸಿಬ್ಬಂದಿಯ ಕುಟುಂಬಕ್ಕೆ ಧೈರ್ಯ ನೀಡಿ ಸಾಂತ್ವನ ಹೇಳಿದರು.
ಈ ವೇಳೆ ಮಾತನಾಡಿದ ಎಸ್ಪಿ ಉಮಾಪ್ರಶಾಂತ್, ಘಟನಾ ಸ್ಥಳಕ್ಕೆ ಭೇಟಿ ನೀಡಲಾಗಿದೆ. ಸಿಸಿಟಿವಿ ಕ್ಯಾಮರಾ ಅಳವಡಿಸದೆ ಇರುವುದರಿಂದ ಸಮಸ್ಯೆ ಆಗಿದೆ. ಈ ಕುರಿತು ಪರಿಶೀಲನೆ ನಡೆಸಿ ಮಾಹಿತಿ ಕೊಡುವಂತೆ ಎಚ್ಚರಿಕೆ ನೀಡಲಾಗಿದೆ ಎಂದರು.