ಡೈಲಿ ವಾರ್ತೆ: 13/MAY/2025

ಕುಡಿತದ ಮತ್ತಿನಲ್ಲಿ ತನ್ನದೇ ಮನೆಗೆ ಬೆಂಕಿ ಹಚ್ಚಿದ ಭೂಪ

ಉಡುಪಿ: ವ್ಯಕ್ತಿಯೊಬ್ಬ ಕುಡಿತದ ಮತ್ತಿನಲ್ಲಿ ತನ್ನದೇ ಮನೆಗೆ ಬೆಂಕಿ ಹಚ್ಚಿರುವ ವಿಲಕ್ಷಣ ಘಟನೆ ನಗರದ ಹೊರವಲಯದ ಚಿಟ್ಪಾಡಿಯಲ್ಲಿ ಭಾನುವಾರ ನಡೆದಿದೆ.

ಕುಡಿದು ಬಂದು ರಂಪಾಟ ಮಾಡಿದ ಕುಡುಕ ತನ್ನದೇ ಮನೆಗೆ ಬೆಂಕಿ ಹಚ್ಚಿ ಹುಚ್ಚಾಟ ಮೆರೆದಿದ್ದಾನೆ. ಆತನ ಹುಚ್ಚಾಟವನ್ನು ಎದುರಿಸಲಾಗದ ಕುಟುಂಬ ತಕ್ಷಣವೇ ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿ, ತಮಗೆ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಸ್ಥಳಕ್ಕೆ ಬಂದ ನಿತ್ಯಾನಂದ ಒಳಕಾಡು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿ, ನಡೆಯಬಹುದಾಗಿದ್ದು ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.
ಇನ್ನೂ ಕುಡಿತದ ಚಟಕ್ಕೆ ಬಿದ್ದ ಆ ವ್ಯಕ್ತಿಯನ್ನು ಮದ್ಯವರ್ಜನ ಶಿಬಿರ ಕೇಂದ್ರಕ್ಕೆ ನಿತ್ಯಾನಂದ ಒಳಕಾಡು ಅವರು ಸೇರ್ಪಡೆ ಮಾಡಿಸಿದ್ದಾರೆ. ಇನ್ನಾದರೂ ಆ ವ್ಯಕ್ತಿ ಬದಲಾಗುತ್ತಾನಾ ಎಂದು ಕಾದು ನೋಡಬೇಕಿದೆ.