



ಡೈಲಿ ವಾರ್ತೆ: 14/MAY/2025


ಪಾಕಿಸ್ತಾನದಿಂದ ಸೆರೆಯಾಗಿದ್ದ ಬಿಎಸ್ಎಫ್ ಯೋಧ 3 ವಾರಗಳ ಬಳಿಕ ಬಿಡುಗಡೆ

ಅಮೃತಸರ(ಪಂಜಾಬ್): ಏಪ್ರಿಲ್ 23ರಂದು ಪಂಜಾಬ್‌ನ ಅಟ್ಟಾರಿ-ವಾಘಾ ಗಡಿ ಬಳಿ ಬಂಧಿಸಲ್ಪಟ್ಟ ಬಿಎಸ್‌ಎಫ್ ಯೋಧ ಪೂರ್ಣಂ ಕುಮಾರ್ ಶಾ ಅವರನ್ನು ಪಾಕಿಸ್ತಾನ ಬುಧವಾರ ಭಾರತಕ್ಕೆ ಹಸ್ತಾಂತರಿಸಿದೆ. ಸೈನಿಕನನ್ನು ಬೆಳಗ್ಗೆ 10:30ಕ್ಕೆ ಪಾಕಿಸ್ತಾನ ರೇಂಜರ್ಸ್ ಗಡಿ ಭದ್ರತಾ ಪಡೆಗೆ (ಬಿಎಸ್‌ಎಫ್) ಹಸ್ತಾಂತರಿಸಿದ್ದಾರೆ.
ಹಸ್ತಾಂತರ ಪ್ರಕ್ರಿಯೆಯು ಶಾಂತಿಯುತವಾಗಿ ಶಿಷ್ಟಾಚಾರಗಳ ಪ್ರಕಾರ ನಡೆದಿದೆ ಎಂದು ಬಿಎಸ್‌ಎಫ್ ವಕ್ತಾರರು ತಿಳಿಸಿದ್ದಾರೆ.
‘ಬಿಎಸ್‌ಎಫ್ ಕಾನ್‌ಸ್ಟೆಬಲ್ ಏಪ್ರಿಲ್ 23ರಂದು ತನ್ನ ಕರ್ತವ್ಯದ ಸಮಯದಲ್ಲಿ ಆಕಸ್ಮಿಕವಾಗಿ ಗಡಿ ದಾಟಿದ್ದರು. ಆ ಬಳಿಕ ಪಾಕಿಸ್ತಾನ ರೇಂಜರ್‌ಗಳ ವಶದಲ್ಲಿದ್ದರು’ ಎಂದು ಪಂಜಾಬ್ ಗಡಿ ಭದ್ರತಾ ಪಡೆಯು ಹೇಳಿಕೆಯಲ್ಲಿ ತಿಳಿಸಿದೆ.
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯವರಾದ ಯೋಧ ಶಾ ಅವರನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮರುದಿನ ಏಪ್ರಿಲ್ 23ರಂದು ಫಿರೋಜ್‌ಪುರ ಜಿಲ್ಲೆಯ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ರೇಂಜರ್‌ಗಳು ಬಂಧಿಸಿದ್ದರು. ಮೇ 10ರಂದು ಭಾರತ ಮತ್ತು ಪಾಕಿಸ್ತಾನಗಳು ಪರಸ್ಪರ ಮಿಲಿಟರಿ ಕಾರ್ಯಾಚರಣೆ ನಿಲ್ಲಿಸಲು ಒಪ್ಪಿದ ಕೆಲ ದಿನಗಳ ಬಳಿಕ ಯೋಧನ ಹಸ್ತಾಂತರ ಪ್ರಕ್ರಿಯೆ ನಡೆದಿದೆ.