



ಡೈಲಿ ವಾರ್ತೆ: 17/MAY/2025


ಬಿಡದಿಯಲ್ಲಿ ಸಾಮೂಹಿಕ ಅತ್ಯಾಚಾರಗೈದು ಕೊಲೆಗೈದ ದಲಿತ ಬಾಲಕಿಗೆ ನ್ಯಾಯ ದೊರಕಲಿ: ವಿಮೆನ್ ಇಂಡಿಯಾ ಮೂವ್ಮೆಂಟ್ ಆಗ್ರಹ

ರಾಜ್ಯ ರಾಜಧಾನಿಗೆ ತಾಗಿರುವ ಬಿಡದಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಪೋಲೀಸರ ನಿರ್ಲಕ್ಷ್ಯದ ನಡೆಯನ್ನು ವಿರುದ್ಧ ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ವಿಮ್ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ ,
ಇತ್ತೀಚಿಗೆ ರಾಜ್ಯದಲ್ಲಿ ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ ಮತ್ತು ಹೆಚ್ಚಾಗಿ ಮಹಿಳೆಯರ ಮೇಲೆ ಭೀಕರವಾಗಿ ನಡೆಯುತ್ತಿರುವ ಹಿಂಸಾತ್ಮಕ ಪ್ರಕರಣಗಳನ್ನು ನೋಡುವಾಗ ಸುಸಂಸ್ಕೃತಿ, ನೈತಿಕ ಮೌಲ್ಯಗಳ ತಳಹದಿಯ ಮೇಲೆ ನೆಲೆಗೊಂಡು, ಸುಸಭ್ಯ ಸಮಾಜವಾಗಿ ಗುರಿತಿಸಲ್ಪಡುತ್ತಿದ್ದ ಕರ್ನಾಟಕದ ಕಾನೂನು ಸುವ್ಯವಸ್ಥೆ ಕುಸಿದು ಬಿದ್ದು, ಒಂದು ಅನಾಗರಿಕರ ತಾಣದಂತಾಗಿದೆ ಎಂದು ಹೇಳಿದರು.
ಜನರು ಸದಾ ಭಯ ಭೀತಿಯಲ್ಲಿ ಬದುಕುವಂತಾಗಿದೆ. ಅತ್ಯಾಚಾರ ನಡೆದರೂ ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ ಪೋಲೀಸರ ನಡೆ ಪ್ರಶ್ನಿಸಿದರೆ ಪೊಲೀಸರು ಹಲ್ಲೆ ಮಾಡುತ್ತಾರೆ ಎನ್ನುವುದಾದರೆ ಈ ವ್ಯವಸ್ಥೆ ಅತ್ಯಾಚಾರಿಗಳ ರಕ್ಷಣೆಗೆ ನಿಂತಿರುವ ಹಾಗೆ ಭಾಸವಾಗುತ್ತಿದೆ. ಸಮಾಜದಲ್ಲಿ ನ್ಯಾಯ ,ನೀತಿ, ನೈತಿಕತೆ ಸ್ಥಾಪಿಸಲು ಪಣತೊಡಬೇಕಾದ ಆರಕ್ಷಕರು ಭಕ್ಷಕರಾಗಿ ವರ್ತಿಸುತ್ತಿದ್ದಾರೆ.
ಅತ್ಯಂತ ದಾರುಣವಾಗಿ ಅತ್ಯಾಚಾರಕ್ಕೆ ಒಳಗಾಗಿ ಸಾವನ್ನಪ್ಪಿದ ಬಿಡದಿಯ ಈ 14 ವರ್ಷದ ಮೂಗ ಬಾಲಕಿಗಾಗಿ ಧ್ವನಿಯೆತ್ತಲು ಮಾಧ್ಯಮಗಳಿಗೆ ಸಮಯವೇ ಸಿಕ್ಕಿಲ್ಲ . ಟಿ.ಆರ್.ಪಿ ಗಾಗಿ ಒಂದು ಕ್ಷುಲ್ಲಕ ವಿಚಾರವನ್ನು ಮುಂದಿಟ್ಟುಕೊಂಡು ತಾಸುಗಟ್ಟಲೆ ಕುಳಿತು ಡಿಬೆಟ್ ನಡೆಸುವ ಮಾಧ್ಯಮಗಳು ಈ ಪ್ರಕರಣದ ಕುರಿತು ಚರ್ಚಿಸುವ ಗೋಜಿಗೆ ಹೋಗುವುದಿಲ್ಲ.
ಸ್ವಘೋಷಿತ ಧರ್ಮ ರಕ್ಷಕರಿಗೆ ಬೀದಿಗಿಳಿದು ಹೋರಾಡಲು ಈ ಮುಗ್ಧ ಹೆಣ್ಣಿನ ಆರ್ತನಾದ ಕೇಳಿಸಲೇ ಇಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರವು ಅತ್ಯಂತ ಬರ್ಬರವೆನಿಸಿದ ಈ
ಅತ್ಯಾಚಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ಅಧಿಕಾರಿಗಳ ಅಧೀನತೆಯಲ್ಲಿ ಈ ಪ್ರಕರಣದ ತನಿಖೆ ನಡೆಸಿ, ನಿರ್ಲಕ್ಷ್ಯ ತೋರಿದ ಪೋಲೀಸರ ವಿರುದ್ಧ ಕಾನೂನು ಕ್ರಮ ಜರುಗಿಸಿ ರಾಜ್ಯದಲ್ಲಿ ಇಂತಹ ಪ್ರಕರಣಗಳನ್ನು ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಕೈಗೊಂಡು ಹೆಣ್ಣುಮಕ್ಕಳ ಸುರಕ್ಷತೆಯನ್ನು ಖಾತಾರಿಪಡಿಸಬೇಕು ಎಂದು ಅವರು ಆಗ್ರಹಿಸಿದರು.