ಡೈಲಿ ವಾರ್ತೆ: 19/MAY/2025

ಧರ್ಮಸ್ಥಳ ಮೂಲದ ಏರೋಸ್ಪೇಸ್ ಎಂಜಿನಿಯರ್ ಸಾವು ಪ್ರಕರಣಕ್ಕೆ ಟ್ವಿಸ್ಟ್ – ಎರಡು ಮಕ್ಕಳ ತಂದೆಯೊಂದಿಗೆ ಪ್ರೇಮ ವೈಫಲ್ಯ

ಚಂಡೀಗಢ/ಮಂಗಳೂರು: ಧರ್ಮಸ್ಥಳ ಮೂಲದ ಏರೋಸ್ಪೆಸ್ ಎಂಜಿನಿಯರ್ ಪಂಜಾಬ್ ಕಾಲೇಜಿನಲ್ಲಿ ಸಾವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಧರ್ಮಸ್ಥಳದ ಬೊಳಿಯೂರು ನಿವಾಸಿ ಆಕಾಂಕ್ಷ ಎಸ್ ನಾಯರ್ 6 ತಿಂಗಳ ಹಿಂದೆ ದೆಹಲಿಯ ಸ್ಪೈಸ್ ಜೆಟ್ ಏರೋಸ್ಪೇಸ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದಳು. ಹೆಚ್ಚಿನ ತರಬೇತಿಗೆ ಜರ್ಮನಿಗೆ ತೆರಳಲು ತಯಾರಿ ನಡೆಡಸಿದ್ದ ಆಕಾಂಕ್ಷ ಕೆಲವು ಶೈಕ್ಷಣಿಕ ದಾಖಲೆಗಳನ್ನು ಶುಕ್ರವಾರ ಪಂಜಾಬ್‌ನ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಗೆ ತೆರಳಿದ್ದಳು. ಬಳಿಕ ಕಾಲೇಜಿನ ನಾಲ್ಕನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಳು. ಆಕಾಂಕ್ಷ ಪೋಷಕರು ಕಾಲೇಜಿನವರೇ ನನ್ನ ಮಗಳಿಗೆ ಏನೋ ಮಾಡಿದ್ದಾರೆ, ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಹುಡುಗಿಯಲ್ಲ ಎಂದು ಆರೋಪಿಸಿದ್ದರು. ಆದರೆ ಅಸಲಿ ವಿಚಾರ ಈಗ ಹೊರಬಿದ್ದಿದೆ.

ಆಕಾಂಕ್ಷಗೆ ತಾನು ಓದುತ್ತಿದ್ದ ಯೂನಿವರ್ಸಿಟಿಯ ಪ್ರೊಫೆಸರ್ ಜೊತೆ ಪ್ರೇಮವಾಗಿತ್ತು. ಕೇರಳದ ಕೊಟ್ಟಾಯಂ ನಿವಾಸಿ ಎರಡು ಮಕ್ಕಳ ತಂದೆ ಬಿಜಿಲ್ ಮ್ಯಾಥ್ಯೂ ಜೊತೆ ಆಕಾಂಕ್ಷಗೆ ಪ್ರೇಮಾಂಕುರವಾಗಿತ್ತು. ಅಲ್ಲದೇ ಮ್ಯಾಥ್ಯೂ ಜೊತೆ ಆತನ ಮನೆಗೆ ಹೋಗಿ ಮದುವೆಯಾಗುವಂತೆ ಒತ್ತಾಯಿಸಿ ಆಕಾಂಕ್ಷ ಜಗಳ ಮಾಡಿದ್ದಳು. ಬಳಿಕ ಕಾಲೇಜಿನಲ್ಲೂ ಜಗಳ ಮಾಡಿ ಕಟ್ಟಡದ ನಾಲ್ಕನೇ ಮಹಡಿಗೆ ಹೋಗಿ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆತ್ಮಹತ್ಯೆಗೆ ಪ್ರೇರಣೆ ಹಿನ್ನೆಲೆ ಮ್ಯಾಥ್ಯೂ ವಿರುದ್ದ ಪಂಜಾಬ್‌ನ ಜಲಂಧರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಂದು ಶವಪರೀಕ್ಷೆ ಬಳಿಕ ಹೆತ್ತವರಿಗೆ ಆಕಾಂಕ್ಷಳ ಮೃತದೇಹ ಹಸ್ತಾಂತರಿಸಲಾಗುತ್ತದೆ. ಇಂದು ಸಂಜೆ ವೇಳೆಗೆ ಧರ್ಮಸ್ಥಳ ಬೊಳಿಯೂರು ಮನೆಯಲ್ಲಿ ಆಕಾಂಕ್ಷ ಅಂತ್ಯಸಂಸ್ಕಾರ ನಡೆಯಲಿದೆ.‌