ಡೈಲಿ ವಾರ್ತೆ: 19/MAY/2025

ಮಡಿಕೇರಿ | ಗುತ್ತಿಗೆದಾರನ ಹತ್ಯೆ ಪ್ರಕರಣ: ಮಹಿಳೆ ಸೇರಿ ಮೂವರ ಬಂಧನ!

ಮಡಿಕೇರಿ : ಸೋಮವಾರಪೇಟೆ ತಾಲೂಕಿನ ಚೌಡ್ಲು ಗ್ರಾಮದ ನಿವಾಸಿ ಗುತ್ತಿಗೆದಾರ ಸಂಪತ್ ಶಂಭು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ.

ಸೋಮವಾರಪೇಟೆಯ ಹಾನಗಲ್ಲು ಗ್ರಾಮದ ಕಿರಣ್ ಬಿ.ಎಂ. (44), ಚೌಡ್ಲು ಗ್ರಾಮದ ಗಣಪತಿ ಪಿ.ಎಂ. (44) ಹಾಗೂ ಹಾನಗಲ್ಲು ಗ್ರಾಮದ ಕಿರಣ್‌ನ ಪತ್ನಿ ಸಂಗೀತಾ ಬಂಧಿತ ಆರೋಪಿಗಳು.

ಕೃತ್ಯಕ್ಕೆ ಬಳಸಿದ ಕೋವಿ, ಕತ್ತಿ, ದೊಣ್ಣೆ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಕೃತ್ಯ ಎಸಗಲು ಆರೋಪಿಗಳಿಗೆ ಸಹಕರಿಸಿದ ಮತ್ತು ಆರೋಪಿಗಳಾದ ಕಿರಣ್ ಹಾಗೂ ಗಣಪತಿ ತಲೆಮರೆಸಿಕೊಳ್ಳಲು ಸಹಕರಿಸಿದ ಇತರ ಆರೋಪಿಗಳನ್ನು ಆದಷ್ಟು ಶೀಘ್ರ ಪತ್ತೆ ಹಚ್ಚಿ ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೇ 9ರಂದು ತಮ್ಮ ಸ್ನೇಹಿತ ಜಾನ್ ಪೌಲ್ ಅವರ ಕಾರನ್ನು ಕೋರಿಕೆಯ ಮೇರೆಗೆ ತೆಗೆದುಕೊಂಡು ಹೋಗಿದ್ದ ಸಂಪತ್ ಅವರು ಮೇ 10 ರಂದು ರಾತ್ರಿಯಾದರೂ ಬಾರದೆ ಇದ್ದಾಗ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸಕಲೇಶಪುರ ತಾಲೂಕಿನ ಯಸಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಹಳ್ಳಿ ಗ್ರಾಮದಲ್ಲಿ ಮೇ 10ರಂದು ಕಾರು ಪತ್ತೆಯಾಗಿತ್ತು. ಕಾರಿನಲ್ಲಿ ರಕ್ತದ ಕಲೆ ಕಂಡು ಬಂದಿದ್ದು, ಯಸಳೂರು ಪೊಲೀಸರು ಕಾರು ಮಾಲಕರ ಪತ್ತೆಗೆ ತನಿಖೆ ಕೈಗೊಂಡರು. ಸಂಪತ್ ಅವರು ತೆಗೆದುಕೊಂಡು ಹೋಗಿದ್ದ ಕಾರು ಇದು ಎಂದು ಖಾತ್ರಿಯಾಗಿತ್ತು. ಮೇ 14ರಂದು ಸಕಲೇಶಪುರ ತಾಲೂಕಿನ ವಣಗೂರು ಅರಣ್ಯದಲ್ಲಿ ಸಂಪತ್ ಅವರ ಮೃತದೇಹ ಪತ್ತೆಯಾಗಿತ್ತು.

ಸ್ಥಳಕ್ಕೆ ಕೊಡಗು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಮೇ 16ರಂದು ಕಿರಣ್ ನನ್ನು ಬೆಂಗಳೂರಿನಲ್ಲಿ, ಮೇ 17 ರಂದು ಗಣಪತಿಯನ್ನು ಬೆಳ್ತಂಗಡಿಯಲ್ಲಿ ಹಾಗೂ ಮೇ 18 ರಂದು ಸಂಗೀತಾಳನ್ನು ಸೋಮವಾರಪೇಟೆಯಲ್ಲಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾತು.

ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ಮಾಡುವ ಉದ್ದೇಶದಿಂದ ಸಂಚು ರೂಪಿಸಿ ಆರೋಪಿ ಸಂಗೀತಾ ಸಂಪತ್‌ನನ್ನು ಸೋಮವಾರಪೇಟೆಯ ಹಾನಗಲ್ ಗ್ರಾಮಕ್ಕೆ ಮೇ 9ರಂದು ಬರ ಮಾಡಿಕೊಳ್ಳುತ್ತಾಳೆ. ಇತರ ಆರೋಪಿಗಳಾದ ಗಣಪತಿ ಹಾಗೂ ಕಿರಣ್ ಅವರೊಂದಿಗೆ ಸೇರಿಕೊಂಡು ಕೋವಿಯಿಂದ ಬೆದರಿಸಿ, ದೊಣ್ಣೆಯಿಂದ ಹೊಡೆದು, ಕತ್ತಿಯಿಂದ ಕಡಿದು ಹತ್ಯೆ ಮಾಡುತ್ತಾರೆ. ಸಂಪತ್ ಚಲಾಯಿಸಿಕೊಂಡು ಬಂದಿದ್ದ ಕಾರಿನಲ್ಲಿ ಮೃತದೇಹವನ್ನು ಹಾಕಿಕೊಂಡು ಸಕಲೇಶಪುರ ತಾಲೂಕು ವಣಗೂರು ಅರಣ್ಯದ ಬಳಿ ಬರುತ್ತಾರೆ. ಮೃತದೇಹವನ್ನು ಬಿಸಾಡಿ ಕಾರನ್ನು ಕಲ್ಲಳ್ಳಿ ಗ್ರಾಮದಲ್ಲಿ ನಿಲ್ಲಿಸಿ ತಮ್ಮ ಸಂಚಿನಂತೆ ಮೊದಲೇ ಬೆಂಗಳೂರಿನಿಂದ ಬರಮಾಡಿಕೊಂಡಿದ್ದ ಬೇರೊಂದು ಕಾರಿನಲ್ಲಿ ಯಾರಿಗೂ ತಿಳಿಯದಂತೆ ವಾಪಸ್ ಬಂದಿರುತ್ತಾರೆ ಎಂದು ಎಸ್ಪಿ ವಿವರಿಸಿದರು.

ಕೊಲೆಯಾದ ಸಂಪತ್ ಹಾಗೂ ಮೂವರು ಆರೋಪಿಗಳು ಸ್ನೇಹಿತರಾಗಿದ್ದು, ಲಕ್ಷಾಂತರ ರೂ. ಹಣಕಾಸಿನ ವ್ಯವಹಾರ ಹತ್ಯೆಗೆ ಕಾರಣ ಎಂದು ಆರೋಪಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್ಪಿ ಪಿ.ಚಂದ್ರಶೇಖರ್, ವೀರಾಜಪೇಟೆ ಉಪವಿಭಾಗದ ಡಿವೈಎಸ್ಪಿ ಎಸ್.ಮಹೇಶ್ ಕುಮಾರ್, ಕುಶಾಲನಗರ ವೃತ್ತ ಸಿಪಿಐ ದಿನೇಶ್‌ಕುಮಾರ್, ಪಟ್ಟಣ ಠಾಣೆ ಪಿಎಸ್ಸೈ ಎಚ್.ಟಿ.ಗೀತಾ, ಎಎಸ್ಸೈ ಮಂಜುನಾಥ, ಗ್ರಾಮಾಂತರ ಠಾಣೆ ಪಿಎಸ್ಸೈ ಪಿ.ಮೋಹನ್‌ರಾಜ್, ಎಎಸ್ಸೈ ವಿ.ಜಿ.ವೆಂಕಟೇಶ್, ಪಿಐ ಬಿ.ಜಿ.ಪ್ರಕಾಶ್, ಸೋಮವಾರಪೇಟೆ ಪಿಐ ಎಂ.ಮುದ್ದು ಮಾದೇವ, ಪಿಎಸ್ಸೈ ಗೋಪಾಲ್, ಎಎಸ್ಸೈ ಕಾಳಿಯಪ್ಪ, ಗೋಣಿಕೊಪ್ಪ ಸಿಪಿಐ ಶಿವರಾಜ್ ಆರ್. ಮುದೋಳ್, ಜಿಲ್ಲಾ ಗುಪ್ತದಳದ ಪಿಐ ಮೇದಪ್ಪ ಐ.ಪಿ., ಡಿಸಿಆರ್‌ಬಿ ಪಿಐ ಚಂದ್ರಶೇಖರ್, ನಾಪೊಕ್ಲು ಪಿಎಸ್ಸೈ ಮಂಜುನಾಥ್, ಶ್ರೀಮಂಗಲ ಪಿಎಸ್ಸೈ ರವೀಂದ್ರ, ವೀರಾಜಪೇಟೆ ಠಾಣೆ ಎಎಸ್ಸೈ ಮಂಜುನಾಥ್, ಪೊಲೀಸ್ ಸಿಬ್ಬಂದಿಯಾದ ಶನಿವಾರಸಂತೆ ಜಿ.ಆರ್.ಉದಯಕುಮಾರ್, ಸುಂಟಿಕೊಪ್ಪಪ್ರವೀಣ್, ಸೋಮವಾರಪೇಟೆ ಕೆ.ಎಸ್.ಸುದೀಶ್ ಕುಮಾರ್, ಶರತ್, ಕುಶಾಲನಗರ ಸುನೀಲ್ ಕುಮಾರ್ ಎಚ್.ಸಿ., ಗಾಯಿತ್ರಿ, ದಿವ್ಯ, ಶಶಿಕಲಾ, ಸುನಿಲ್, ಮಹೇಂದ್ರ ಕೆ.ಎಸ್., ಬಸಪ್ಪ, ಸ್ವಾಮಿ, ವೀರಾಜಪೇಟೆ ಜೋಶ್ ನಿಶಾಂತ್, ಗಿರೀಶ್, ನಾಪೊಕ್ಲು ಮಧು, ಡಿಸಿಆರ್‌ಬಿ ಯೋಗೇಶ್, ನಿರಂಜನ್, ಶರತ್, ರಾಜೇಶ್ ಸಿ.ಕೆ. ಹಾಗೂ ಪ್ರವೀಣ್ ಬಿ.ಕೆ. ಪಾಲ್ಗೊಂಡಿದ್ದರು.