ಡೈಲಿ ವಾರ್ತೆ: 20/MAY/2025

ಶಿರೂರು ಭೂ ಕುಸಿತ ದುರಂತದಿಂದ ಪಾರಾಗಿದ್ದ ವೃದ್ಧ ಸಿಡಿಲಿಗೆ ಬಲಿ!

ಅಂಕೋಲಾ: ಶಿರೂರು ಗುಡ್ಡ ಕುಸಿತ ದುರಂತದಿಂದ ಪಾರಾಗಿದ್ದ ವೃದ್ಧನೊಬ್ಬ ಸಿಡಿಲು ಬಡಿದು ಸಾವನ್ನಪ್ಪಿರುವುದು ಉತ್ತರ ಕನ್ನಡದ ಅಂಕೋಲ ತಾಲೂಕಿನ ಉಳವರೆಯಲ್ಲಿ ಗ್ರಾಮದಲ್ಲಿ ನಡೆದಿದೆ.

ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದೆ. ಇದರಿಂದ ಸ್ಥಳದಲ್ಲೇ ಅವರು ಸಾವಿಗೀಡಾಗಿದ್ದಾರೆ.

ಅಂಕೋಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು, ಪರಿಶೀಲನೆ ನಡೆಸಿದ್ದಾರೆ. ಶವವನ್ನು ಅಂಕೋಲ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಶಿರೂರು ದುರಂತದಲ್ಲಿ ಜೀವ ಉಳಿಸಿಕೊಂಡಿದ್ದ ತಮ್ಮಣ್ಣಿ ಗೌಡ: 2024ರ ಜುಲೈ 16 ರಂದು ಅಂಕೋಲದ ಶಿರೂರಿನಲ್ಲಿ ಭೂ ಕುಸಿತವಾಗಿ ಇದರ ಮಣ್ಣು ಗಂಗಾವಳಿ ನದಿಗೆ ಬಿದ್ದು ಪಕ್ಕದಲ್ಲಿದ್ದ ಉಳವರೆ ಗ್ರಾಮಕ್ಕೆ ನದಿ ನೀರು ಅಪ್ಪಳಿಸಿತ್ತು. ಈ ದುರಂತದಲ್ಲಿ 11 ಜನ ಸಾವನ್ನಪ್ಪಿದ್ದರು. ಈ ಸಂದರ್ಭದಲ್ಲಿ ಸ್ಪಲ್ಪದರಲ್ಲೇ ತಮ್ಮಣ್ಣಿ ಗೌಡ ಪಾರಾಗಿದ್ದರು. ಪ್ರಕೃತಿ ವಿಕೋಪದಲ್ಲಿ ಬೀಸುವ ದೊಣ್ಣೆಯಿಂದ ಪಾರಾಗಿ ಜೀವ ಉಳಿಸಿಕೊಂಡಾತ ಮತ್ತೆ ಪ್ರಕೃತಿ ವಿಕೋಪ ಬಲಿ ಪಡೆದಿದೆ.