ಡೈಲಿ ವಾರ್ತೆ: 22/MAY/2025

ಬಂಟ್ವಾಳ| ಮನೆಗೆ ನುಗ್ಗಿ ಲಕ್ಷಾಂತರ ರೂ. ಕಳವು ಪ್ರಕರಣ – ಆರೋಪಿ ಬಂಧನ

ಬಂಟ್ವಾಳ: ಮನೆಯೊಳಗೆ ನುಗ್ಗಿ ಲಕ್ಷಾಂತರ ರೂ ಮೌಲ್ಯದ ಚಿನ್ನವನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಬಂಧಿಸಿರುವ ಬಂಟ್ವಾಳ ಗ್ರಾಮಾಂತರ ಪೋಲಿಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ತುಂಬೆ ನಿವಾಸಿ ಹಸನ್ ಬಾವ ಎಂಬಾತ ಬಂಧಿತ ಆರೋಪಿ.
ಮೇ. 19 ರಂದು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ತುಂಬೆ ಗ್ರಾಮದ ಹಾಮದ್ ಹಾಜಿ‌ ರಸ್ತೆಯ ಪರ್ಲಬೈಲು ನಿವಾಸಿ ಮಜೀದ್ ಎಂಬವರ ಮನೆಯಲ್ಲಿ ಸುಮಾರು 1,49,000 ಸಾವಿರ ಮೌಲ್ಯದ 28 ಗ್ರಾಂ ತೂಕದ ಚಿನ್ನದ ನೆಕ್ಲೆಸ್ ಕಳವು ನಡೆದಿತ್ತು.

ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಮಹಡಿಯ ಹಂಚನ್ನು ಸರಿಸಿ ಒಳಪ್ರವೇಶಿಸಿ ಮನೆಯ ಕಪಾಟಿನಲ್ಲಿ ಇಟ್ಟಿದ್ದ ಚಿನ್ನವನ್ನು ಕಳವು ಮಾಡಲಾಗಿತ್ತು.

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಬಂಟ್ವಾಳ ಗ್ರಾಮಾಂತರ ಠಾಣೆಯ ಪೋಲೀಸರು ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕಳ್ಳತನ ಪ್ರಕರಣವನ್ನು ಎಸ್.ಪಿ. ಯತೀಶ್‌ ಎನ್‌, ಹೆಚ್ಚುವರಿ ಪೋಲೀಸ್ ಅಧೀಕ್ಷಕ ರಾಜೇಂದ್ರ, ಬಂಟ್ವಾಳ ಡಿ.ವೈ.ಎಸ್.ಪಿ‌. ವಿಜಯಪ್ರಸಾದ್ ರವರ ಮಾರ್ಗದರ್ಶನದಂತೆ, ಬಂಟ್ವಾಳ‌ ಗ್ರಾಮಾಂತರ ಪೊಲೀಸ್‌ ಠಾಣಾ ಪೊಲೀಸ್ ನಿರೀಕ್ಷಕರಾದ ಶಿವಕುಮಾರ ಬಿ.ರವರ ನೇತೃತ್ವದಲ್ಲಿ ಠಾಣಾಧಿಕಾರಿಗಳಾದ ಮಂಜುನಾಥ ಟಿ. ಖೀರಪ್ಪ ಘಟಕಾಂಬಳೆ.
ಎ.ಎಸ್.‌ಐ ಗಳಾದ ಗಿರೀಶ್‌, ಬಾಲಕೃಷ್ಣ , ಹೆಚ್.ಸಿ. ಗಳಾದ ನಝೀರ್‌, ಹರಿಶ್ಚಂದ್ರ, ಲೋಕೇಶ್‌, ಕೃಷ್ಣ ನಾಯ್ಕ, ಪಿ.ಸಿ ಸಹದೇವ ಇವರುಗಳು ಕಾರ್ಯಾಚರಣೆ ನಡೆಸಿರುತ್ತಾರೆ.