ಡೈಲಿ ವಾರ್ತೆ: 23/MAY/2025

ಕರ್ನಾಟಕದಲ್ಲಿ ಮುಂದಿನ ಐದಾರು ದಿನ ಭಾರೀ ಮಳೆ: ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಮುಂದಿನ ಐದಾರು ದಿನಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಇಂದಿನಿಂದ ಮೇ 28ರ ತನಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಮೇತ ಮಳೆಯಾಗಲಿದೆ ಎಂದು ತಿಳಿಸಿದೆ. ಇನ್ನು ಬೆಂಗಳೂರಿನಲ್ಲಿ ಮಳೆ ಪ್ರಮಾಣ ಕಡಿಮೆ ಇದ್ದು, ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ, ಮಲೆನಾಡಿನಲ್ಲಿ ಭಾರಿ ಮಳೆಯಾಗೋ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಈ ಜಿಲ್ಲೆಗಳಿಗೆ ಇಂದಿನಿಂದ ಮೆ.26ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಮೇ 22-24ರವರೆಗೆ ಕೊಂಕಣ ಮತ್ತು ಗೋವಾದಲ್ಲಿ ಮತ್ತು ಮೇ 24 ರಂದು ಕರಾವಳಿ ಕರ್ನಾಟಕದಾದ್ಯಂತ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಮೇ 28 ರವರೆಗೆ ಕೇರಳ ಮತ್ತು ಕರ್ನಾಟಕದಾದ್ಯಂತ ಭಾರೀ ಮಳೆಯಾಗುವ ನಿರೀಕ್ಷೆ ಇದ್ದು, ದಕ್ಷಿಣ ಪರ್ಯಾಯ ದ್ವೀಪದಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ (ಗಂಟೆಗೆ 40-50 ಕಿಲೋಮೀಟರ್) ಇರುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಧಾರಾಕಾರ ಮಳೆ ಹಿನ್ನೆಲೆ ಉಡುಪಿ, ಉತ್ತರ ಕನ್ನಡ ಜಿಲ್ಲಾಡಳಿತ ಮೀನುಗಾರಿಕೆಯನ್ನ ಸಂಪೂರ್ಣ ನಿಷೇಧಿಸಿದೆ. ಆಳಸಮುದ್ರಕ್ಕೆ ಹೋಗಿದ್ದ ಭಾರಿ ಗಾತ್ರದ ಬೋಟುಗಳು ವಾಪಸು ಬರುತ್ತಿವೆ. ಈಗಾಗಲೇ ಕೆಲವು ದಡದಲ್ಲಿ ಲಂಗರು ಹಾಕಿವೆ. ಮೀನುಗಾರಿಕಾ ಋತು ತಿಂಗಳ ಅಂತ್ಯದವರೆಗೂ ಇತ್ತು ಆದ್ರೆ ಮಳೆಯಿಂದಾಗಿ ಅವಧಿಗೂ ಮುನ್ನ ಮೀನುಗಾರಿಕಾ ಋತು ಅಂತ್ಯಗೊಂಡಿದೆ.

ಕಾಫಿನಾಡಿನಲ್ಲಿ ಐದು ದಿನಗಳ ಕಾಲ‌ ಆರೆಂಜ್ ಅಲರ್ಟ್
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದ್ದು, ಮೇ 23 ರಿಂದ ಮೇ 27 ರ ವರೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕಳೆದ‌ 15 ದಿನಗಳಿಂದ ಧಾರಾಕಾರವಾಗಿ ಸುರಿದು ಎರಡು ದಿನಗಳ ಕಾಲ‌ ಬಿಡುವು ನೀಡಿದೆ. ಆದ್ರೆ, ಹವಾಮಾನ ಇಲಾಖೆ ಮುಂದಿನ ಐದು ದಿನ ಭಾರಿ ಮಳೆಯಾಗುವ ಸೂಚನೆ ನೀಡಿದೆ. ಮಲೆನಾಡು ಭಾಗ ಸೇರಿದಂತೆ ಬಯಲುಸೀಮೆ ಭಾಗದಲ್ಲೂ ಭಾರಿ ಮಳೆಯಾಗುವ ಸೂಚನೆ ನೀಡಿದ್ದು,, ಚಿಕ್ಕಮಗಳೂರು ಜಿಲ್ಲಾಡಳಿತದಿಂದ ಹೈ ಅಲರ್ಟ್ ಘೋಷಿಸಲಾಗಿದೆ.