ಡೈಲಿ ವಾರ್ತೆ: 24/MAY/2025

ರಾಷ್ಟ್ರೀಕೃತ ಬ್ಯಾಂಕ್ ಸಿಬ್ಬಂದಿ ಕನ್ನಡದಲ್ಲೇ ವ್ಯವಹರಿಸುವ ಕಾನೂನು ಅಗತ್ಯ-ಸಂಸದ ಕೋಟ

ಉಡುಪಿ: ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಕೃತ ಬ್ಯಾಂಕ್‌ಗಳ ಅಧಿಕಾರಿ, ಸಿಬ್ಬಂದಿಗಳು ಅನ್ಯಭಾಷಿಕರಾಗಿದ್ದರೆ ವೃತ್ತಿಗೆ ಸೇರಿದ 6 ತಿಂಗಳ ಒಳಗೆ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಕಲಿತು ಜನಸಾಮಾನ್ಯರೊಡನೆ ವ್ಯವಹರಿಸುವ ಬಗ್ಗೆ ಸೂಕ್ತ ಸುತ್ತೋಲೆ ಹೊರಡಿಸಬೇಕು ಮತ್ತು ಈ ಬಗ್ಗೆ ನಿರ್ದಿಷ್ಟ ಕಾನೂನು ರೂಪಿಸುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ.

ಇತ್ತೀಚಿಗೆ ರಾಷ್ಟ್ರೀಕೃತ ಬ್ಯಾಂಕ್ ಒಂದರಲ್ಲಿ ಕನ್ನಡ ಮಾತನಾಡುವುದಿಲ್ಲ ಎಂದು ಮ್ಯಾನೇಜರ್ ಒಬ್ಬರು ತೋರಿದ ನಡವಳಿಕೆ ಮುಂದೆ ಎಲ್ಲಿಯೂ ಮರು ಕಳಿಸಬಾರದು. ಹೀಗಾಗಿ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿ, ಸಿಬಂದಿ ಕನ್ನಡ ಕಲಿತು ಇಲ್ಲಿಯವರೊಂದಿಗೆ ವ್ಯವಹರಿಸಬೇಕು ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಲೋಕಸೇವಾ ಆಯೋಗದಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕದಲ್ಲಿ ಸೇವೆ ಸಲ್ಲಿಸುವಾಗ ಕನ್ನಡ ಭಾಷೆಯನ್ನು ಕಲಿತು ವ್ಯವಹರಿಸುವ ಕಾನೂನಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಿಬಂದಿ, ಪ್ರಬಂಧಕರು ಗ್ರಾಹಕರೊಂದಿಗೆ ವ್ಯವಹರಿಸುವಾಗ ಕಡ್ಡಾಯವಾಗಿ ಕನ್ನಡವನ್ನು ಕಲಿತು ವ್ಯವಹರಿಸುವುದು ಅಗತ್ಯ. ಕನ್ನಡದಲ್ಲಿ ವ್ಯವಹರಿಸದೇ ಇರುವ ಅಧಿಕಾರಿ, ಸಿಬಂದಿ ಮೇಲೆ ಶಿಸ್ತು ಕ್ರಮಕೈಗೊಂಡು ಗ್ರಾಹಕರೊಂದಿಗೆ ಕನ್ನಡದಲ್ಲೇ ಮಾತನಾಡುವಂತೆ ಸೂಚಿಸಬೇಕು ಎಂದವರು ಪತ್ರದ ಮೂಲಕ ತಿಳಿಸಿದ್ದಾರೆ.