ಡೈಲಿ ವಾರ್ತೆ: 24/MAY/2025

ಕರ್ನಾಟಕದಲ್ಲಿ ಮತ್ತೆ ಕೊರೊನಾ ಅಟ್ಟಹಾಸ: ಓರ್ವ ಬಲಿ, 38 ಸಕ್ರಿಯ ಕೋವಿಡ್ ಪ್ರಕರಣಗಳು

ಬೆಂಗಳೂರು: ರಾಜ್ಯಕ್ಕೆ ಕೊರೊನಾ ವೈರಸ್ (Covid-19)​ ಮತ್ತೆ ಒಕ್ಕರಿಸಿದೆ. ರಾಜ್ಯದಲ್ಲಿ ಶನಿವಾರ (ಮೇ.24) ಐವರಿಗೆ ಕೊರೊನಾ ಸೋಂಕು ತಗುಲಿದೆ. ಬೆಂಗಳೂರಿನಲ್ಲಿ 85 ವರ್ಷದ ವೃದ್ಧ ಕೊರೊನಾ ಸೋಂಕಿಗೆ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು 38 ಸಕ್ರಿಯ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಅವುಗಳಲ್ಲಿ 32 ಬೆಂಗಳೂರಿನಲ್ಲಿ ದೃಢಪಟ್ಟಿವೆ. ಶನಿವಾರ (ಮೇ.24) ವಿಜಯನಗರ ಜಿಲ್ಲೆಯಲ್ಲಿ ಒಬ್ಬರು, ಮೈಸೂರಿನಲ್ಲಿ ಇಬ್ಬರಿಗೆ ಮತ್ತು ಬೆಂಗಳೂರಿನಲ್ಲಿ ಇಬ್ಬರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ವಿಜಯನಗರ ಜಿಲ್ಲೆಯಲ್ಲಿ 54 ವರ್ಷದ ಮಹಿಳೆಗೆ ಕೊರೊನಾ ಸೋಂಕು ತಗುಲಿದೆ. ​ಸೋಂಕಿತ ಮಹಿಳೆ ವಿಪರೀತ ನೆಗಡಿ, ಕೆಮ್ಮಿನಿಂದ ಬಳಲುತ್ತಿದ್ದರು. ಬಳ್ಳಾರಿಯ ವಿಮ್ಸ್​ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ಕೊರೊನಾ ಸೊಂಕು ತಗುಲಿರುವುದು ದೃಢಪಟ್ಟಿದೆ. ಸದ್ಯ ಮಹಿಳೆ ಹೋಂ ಐಸೋಲೇಷನ್​ನಲ್ಲಿದ್ದಾರೆ. ಮಹಿಳೆ ಇತ್ತೀಚೆಗೆ ಮುಂಬೈನಿಂದ ವಾಪಸಾಗಿದ್ದಾರೆ.

ಬೆಳಗಾವಿ ಜಿಲ್ಲೆಗೂ ಕಾಲಿಟ್ಟ ಕೊರೊನಾ
ಬೆಳಗಾವಿ ಜಿಲ್ಲೆಗೂ ಕೊರೊನಾ ವೈರಸ್​ ಕಾಲಿಟ್ಟದೆ. ಬೆಳಗಾವಿ ನಗರದ ಓರ್ವ ಗರ್ಭಿಣಿಯಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ. ಗರ್ಭಿಣಿ ನ್ಯುಮೋನಿಯಾದಿಂದ ಬಳಲುತ್ತಿದ್ದು, ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬೆಳಗಾವಿ ಡಿಹೆಚ್​ಒ ಡಾ.ಈಶ್ವರ ಗಡಾದಿ ಮಾಹಿತಿ ನೀಡಿದರು. ಗರ್ಭಿಣಿ ತಿಂಗಳ ಹಿಂದೆ ಮಹಾರಾಷ್ಟ್ರದ ಪುಣೆಗೆ ಹೋಗಿ ಬಂದಿದ್ದರು ಎಂದು ತಿಳಿದುಬಂದಿದೆ.