ಡೈಲಿ ವಾರ್ತೆ: 25/MAY/2025

ಪ್ರಿಯಕರನೊಂದಿಗೆ ಮಗಳು ಪರಾರಿ: ಡೆತ್​ನೋಟ್ ಬರೆದಿಟ್ಟು ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಮೈಸೂರು: ಮಗಳು ಮನೆ ಬಿಟ್ಟು ಹೋದ ಕಾರಣ ಮನನೊಂದು ಒಂದೇ ಕುಟುಂಬದ ಮೂರು ಜನ ಹೆಬ್ಬಾಳ ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ನಡೆದಿದೆ.

ಎಚ್.ಡಿ.ಕೋಟೆ ತಾಲೂಕಿನ ಬೂದನೂರು ಗ್ರಾಮದ ನಿವಾಸಿಗಳಾದ ಮಹಾದೇವ ಸ್ವಾಮಿ (55) ಮಂಜುಳಾ (45) ಹಾಗೂ ಇವರ ಕಿರಿಯ ಮಗಳು ಆತ್ಮಹತ್ಯೆ ಮಾಡಿಕೊಂಡವರು.

ಇವರೆಲ್ಲ ತಾಲೂಕಿನ ಬುದನೂರು ಗ್ರಾಮದ ನಿವಾಸಿಗಳಾಗಿದ್ದಾರೆ.
ಬೆಳಗ್ಗೆ ಬೈಕ್​ನಲ್ಲಿ ಜಲಾಶಯಕ್ಕೆ ಬಂದ ಇವರು ಬೈಕ್​ ನಿಲ್ಲಿಸಿ, ಅಲ್ಲೆ ಚಪ್ಪಲಿ ಬಿಟ್ಟು ಡೆತ್​ನೋಟ್ ಬರೆದಿಟ್ಟು ನೀರಿಗೆ ಹಾರಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ಮಾರ್ಗವಾಗಿ ಹೋಗುತ್ತಿದ್ದ ಅದೇ ಗ್ರಾಮಸ್ಥರು ಬೈಕ್​​ ಗಮನಿಸಿ ಹತ್ತಿರ ಬಂದಾಗ ವಿಷಯ ತಿಳಿದಿದೆ. ತಕ್ಷಣ ಗ್ರಾಮಸ್ಥರು ಎಚ್.ಡಿ.ಕೋಟೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ಮೂವರ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರಿಕ್ಷೆಗೆ ಎಚ್.ಡಿ.ಕೋಟೆ ಶವಾಗಾರಕ್ಕೆ ಕಳುಹಿಸಿದ್ದಾರೆ.

ಇತ್ತೀಚೆಗೆ ಮಹಾದೇವಸ್ವಾಮಿ ದಂಪತಿಯ ಹಿರಿಯ ಮಗಳು ಪ್ರೀತಿಸಿ ಮದುವೆಯಾಗಲು ಮನೆಬಿಟ್ಟು ಹೋಗಿರುವ ಕಾರಣ ಮರ್ಯಾದೆಗೆ ಅಂಜಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದು ಡೆತ್​ನೋಟ್​ನಲ್ಲಿ ಬರೆಯಲಾಗಿದೆ ಎಂದು ಪೊಲೀಸ್​ ಮೂಲಗಳು ಖಚಿತ ಪಡಿಸಿವೆ.

ಈ ಬಗ್ಗೆ ತನಿಖೆಯಿಂದ ಹೆಚ್ಚಿನ ವಿಷಯ ತಿಳಿದು ಬರಬೇಕಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಮಾಹಿತಿ ನೀಡಿದರು.