



ಡೈಲಿ ವಾರ್ತೆ: 25/MAY/2025


ಕೋಟ| ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಕೆಂಪು ಮಣ್ಣಿನಿಂದ ವಾಹನ ಸವಾರರ ಪರದಾಟ – ಹೆದ್ದಾರಿ ಇಲಾಖೆ, ಜಿಲ್ಲಾಆಡಳಿತ ಜಾಣ ಕುರುಡು – ಕೋಟ ನಾಗೇಂದ್ರ ಪುತ್ರನ್

ಕೋಟ: ಸಾಸ್ತಾನ ಟೋಲ್ ಗೇಟ್ ನಿಂದ ಕುಂದಾಪುರದವರೆಗೂ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಹಾಕಿದ ಕೆಂಪು ಮಣ್ಣಿನಿಂದಾಗಿ ವಾಹನ ಸವಾರರು ಭಾರೀ ತೊಂದರೆ ಅನುಭವಿಸುತ್ತಿದ್ದಾರೆ. ಟಾರು ರಸ್ತೆಯ ಅಂಚಿನಲ್ಲಿ ಹೆದ್ದಾರಿ ಇಲಾಖೆಯವರು
ಹರವಿದ ಮಣ್ಣಿನೊಂದಿಗೆ ಮಳೆ ನೀರು ಸೇರಿ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ದ್ವಿಚಕ್ರ ವಾಹನಗಳವರು ಜಾರಿ ಬೀಳುವುದು ನಿತ್ಯದ ಪಾಡಾಗಿದೆ. ಕಾರು, ರಿಕ್ಷಾ ಇತರ ಲಘು ವಾಹನಗಳು ಸ್ಕಿಡ್ ಆಗಿ ನಿಯಂತ್ರಣ ತಪ್ಪಿ ಅಪಘಾತಗಳು ನಡೆಯುತ್ತಿವೆ. ಈ ಮಣ್ಣಿನ ಮೇಲೆ ಚಕ್ರಗಳು ಹರಿದಾಗ ದೊಡ್ಡ ಕಂದಕವೇ ಉಂಟಾಗಿ ಮತ್ತಷ್ಟು ಅಪಘಾತಗಳಿಗೆ ಕಾರಣವಾಗುತ್ತಿದೆ. ಇಷ್ಟೆಲ್ಲಾ ತೊಂದರೆಗಳಾಗುತ್ತಿದ್ದರೂ ಹೆದ್ದಾರಿ ಇಲಾಖೆಯವರು, ಜಿಲ್ಲಾಆಡಳಿತ ಜಾಣ ಕುರುಡು ಪ್ರದರ್ಶಿಸಿ, ನೊಂದವರ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿದೆ.

ಒಂದು ತಿಂಗಳ ಹಿಂದೆ ಹೆದ್ದಾರಿಗೆ ಮರು ಡಾಮಾರು ಹಾಕುವಾಗ ಮೊದಲಿನ ಟಾರನ್ನು ಯಂತ್ರದ ಮೂಲಕ ಕೆರೆದು ತೆಗೆಯಲಾಗಿದೆ. ಹೀಗೆ ಕೆರೆಸಿ ತೆಗೆದ ಜಲ್ಲಿ ಮಿಶ್ರಿತ ಟಾರನ್ನು ಹೆದ್ದಾರಿ ಇಲಾಖೆಯವರು ಮೂರು ಯುನಿಟ್ ಗೆ 9 ಸಾವಿರ ರೂಪಾಯಿಗಳಂತೆ ಖಾಸಗಿಯವರಿಗೆ ಮಾರಾಟ ಮಾಡಿದ್ದಾರೆ. ಹಲವರು ಇಂತಹ ಜಲ್ಲಿ ಮಿಶ್ರಿತ ಡಾಮಾರು ಪುಡಿಯನ್ನು ಹೆದ್ದಾರಿಯವರಿಂದ ಖರೀದಿಸಿ ಮನೆ, ಅಂಗಡಿಗಳ ಮುಂದೆ ಹರವಿ ಗಟ್ಟಿಗೊಳಿಸಿದ್ದಾರೆ. ಹೆದ್ದಾರಿಯವರು ಹೀಗೆ ಕೆರೆಸಿದ ಡಾಮಾರನ್ನು ಮಾರಾಟ ಮಾಡಿ ದುಡ್ಡು ಮಾಡಿಕೊಳ್ಳುವುದಕ್ಕಿಂತ ರಸ್ತೆ ಅಂಚಿನಲ್ಲಿ ಮಣ್ಣಿನ ಬದಲಾಗಿ ಹರವಿದ್ದರೆ ಈ ಸಮಸ್ಯೆಯೇ ಉಂಟಾಗುತ್ತಿರಲಿಲ್ಲ. ಅದೆಷ್ಟೋ ಅಮೂಲ್ಯ ಜೀವಗಳು ಉಳಿಯುತ್ತಿದ್ದವು, ನೂರಾರು ಮಂದಿ ಅಂಗ ವಿಕಲರಾಗುತ್ತಿರಲಿಲ್ಲ. ಆದರೆ ಹೆದ್ದಾರಿಯವರ ದುಡ್ಡಿನ ಹಪಾಹಪಿ ಮತ್ತು ಜಿಲ್ಲಾಡಳಿತದ ನಿರ್ಲಕ್ಯ ಸಮಸ್ಯೆಗಳ ಸರಮಾಲೆಯನ್ನೇ ಸೃಷ್ಟಿಸಿದೆ.

ಚತುಷ್ಪಥ ಹೆದ್ದಾರಿ ರಚನೆಯಾದ ನಂತರ ವಾಹನ ಸವಾರರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿಯಾಗಿದೆ. ನೂರಾರು ರೂಪಾಯಿ ಟೋಲ್ ಪಾವತಿಸಿದರೂ ನೆಮ್ಮದಿಯ ಹಾಗೂ ಸುರಕ್ಷಿತ ಸಂಚಾರವಿಲ್ಲ. ಹೆದ್ದಾರಿ ಮಧ್ಯೆ ಅಲ್ಲಲ್ಲಿ ಗುಂಡಿಗಳು. ಅಗತ್ಯವಿರುವಲ್ಲಿ ಎಲ್ಲಿಯೂ ಸರ್ವಿಸ್ ರಸ್ತೆಗಳಿಲ್ಲ. ರಾತ್ರಿ ವೇಳೆ ದಾರಿದೀಪಗಳು ಬೆಳಗುವುದಿಲ್ಲ. ಅಲ್ಲಲ್ಲಿ ರಸ್ತೆ ಅಂಚುಗಳಲ್ಲಿ ಮಣ್ಣು ಸಂಗ್ರಹವಾಗಿ ಹುಲ್ಲು, ಗಿಡಗಳು ಬೆಳೆದು ವಾಹನಗಳು ಬದಿಗೆ ಸರಿಯುವುದು ಅಪಾಯಕಾರಿಯಾಗಿದೆ. ಸಾಸ್ತಾನ ಟೋಲ್ ಗೇಟ್ ಬಳಿ ನಡುರಸ್ತೆಯಲ್ಲೇ ಭಾರೀ ಲಾರಿಗಳನ್ನು ನಿಲ್ಲಿಸಿಕೊಂಡು ಇತರ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟುಮಾಡಿದರೂ ಕೇಳುವವರಿಲ್ಲ! ಆಶ್ಚರ್ಯವೆಂದರೆ, ಪೋಲೀಸರ ಹೈವೇ ಗಸ್ತು ವಾಹನವೂ ಅಲ್ಲೇ ಬದಿಗೆ ನಿಂತಿರುತ್ತದೆ!! ಫ್ಲೈ ಓವರ್ ಮೇಲೆ ಕಸದ ಚೀಲಗಳು. ಹೀಗೆ ಪಟ್ಟಿ ಮಾಡಿದರೆ ಅವ್ಯವಸ್ಥೆಗಳ ಆಗರವೇ ಇದೆ. ಸ್ಥಳೀಯಾಡಳಿತ, ಜನಪ್ರತಿನಿಧಿಗಳು, ಹೆದ್ದಾರಿ ಇಲಾಖೆಯವರು ಕುರುಡು ಮತ್ತು ಮೌನವಾಗಿದ್ದಾರೆ. ಟೋಲ್ ಮಾತ್ರ ವಸೂಲಾಗುತ್ತಲೇ ಇದೆ.

ಆದ್ದರಿಂದ ಕೊಡಲೇ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ ಕೋಟ ಮನವಿ ಮಾಡಿದ್ದಾರೆ.