ಡೈಲಿ ವಾರ್ತೆ: 27/ಮೇ/2025

ಪಕ್ಷ ವಿರೋದಿ ಚಟುವಟಿಕೆ: ಬಿಜೆಪಿ ಪಕ್ಷದಿಂದ ST ಸೋಮಶೇಖರ್, ಶಿವರಾಂ ಹೆಬ್ಬಾರ್ 6 ವರ್ಷ ಉಚ್ಚಾಟನೆ

ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಪಕ್ಷವಿರೋಧಿ ಚಟುವಟಿಕೆ ಆರೋಪದ ಮೇರೆಗೆ ಭಾರತೀಯ ಜನತಾ ಪಕ್ಷ (BJP)ಯಲ್ಲಿ ಮತ್ತೆರಡು ತಲೆದಂಡವಾಗಿದ್ದು, ಶಾಸಕ ST ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.

ಈ ಹಿಂದೆ ಬಿಜೆಪಿ ಪಕ್ಷದ ವಿರುದ್ಧವೇ ಬಹಿರಂಗವಾಗಿ ಮಾತನಾಡುತ್ತಿದ್ದ ಮತ್ತು ಕಾಂಗ್ರೆಸ್ ಪಾಳಯದಲ್ಲಿ ಪದೇ ಪದೇ ಗುರುತಿಸಿಕೊಳ್ಳುತ್ತಿದ್ದ ರೆಬೆಲ್ ಶಾಸಕರಾದ ST ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಅವರನ್ನು ನಿರೀಕ್ಷೆಯಂತೆಯೇ ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಮುಂದಿನ 6 ವರ್ಷಗಳ ಕಾಲ ಇಬ್ಬರೂ ಶಾಸಕರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ತಿಳಿದುಬಂದಿದೆ.

ಶಿಸ್ತು ಸಮಿತಿ ವರದಿ ಬೆನ್ನಲ್ಲೇ ಕಠಿಣ ಕ್ರಮ:
ಈ ಹಿಂದೆ ಪಕ್ಷ ವಿರೋದಿ ಚಟುವಟಿಕೆ ಹಿನ್ನಲೆಯಲ್ಲಿ ಶಾಸಕರಾದ ಎಸ್‌.ಟಿ. ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಕೇಂದ್ರ ಸಮಿತಿಗೆ ಬಿಜೆಪಿ ಶಿಸ್ತು ಸಮಿತಿ ವರದಿ ನೀಡಿತ್ತು.

ಈ ಕುರಿತು ಮಾತನಾಡಿದ್ದ ಬಿಜೆಪಿ ರಾಜ್ಯ ಘಟಕದ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಅವರು, ‘ಶಾಸಕರಾದ ಎಸ್‌.ಟಿ. ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಕೇಂದ್ರ ಸಮಿತಿಗೆ ವರದಿ ನೀಡಿದ್ದೇನೆ. ರಾಷ್ಟ್ರ ಮತ್ತು ರಾಜ್ಯ ನಾಯಕರು ಈ ತಿಂಗಳ ಅಂತ್ಯದೊಳಗೆ ಎಲ್ಲ ಗೊಂದಲಕ್ಕೂ ಅಂತ್ಯ ಹಾಡಲಿದ್ದಾರೆ ಎಂದು ಹೇಳಿದ್ದರು.