ಡೈಲಿ ವಾರ್ತೆ: 31/MAY/2025

ಮಂಗಳೂರು| ಉಸ್ತುವಾರಿ ಸಚಿವರ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಆಕ್ಷೇಪ!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ
ದಿನೇಶ್ ಗುಂಡೂ ರಾವ್ ಅವರು ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮೇ. 31 ರಂದು ಶನಿವಾರ ನಡೆದಿದೆ.

ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಅಬ್ದುಲ್ ರಹಿಮಾನ್ ಕೊಲೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಕಮೆಂಟ್‌ಗಳೇ ಕಾರಣವೇ? ಎಂದು ಪತ್ರಕರ್ತರು ಪ್ರಶ್ನೆ ಕೇಳಿದರು. ಆಗ ಅಲ್ಲಿಯೇ ನಿಂತಿದ್ದ ಕಾಂಗ್ರೆಸ್‌ ಮುಖಂಡ ಉಸ್ಮಾನ್ ಕಲ್ಲಾಪು, ರಹಿಮಾನ್ ಕೊಲೆಗೆ ಬಜ್ಪೆ ಚಲೋದಲ್ಲಿ ಮಾಡಿರುವ ದ್ವೇಷ ಭಾಷಣ ಕಾರಣ. ಪೊಲೀಸರು, ಸರಕಾರ ದ್ವೇಷ ಭಾಷಣ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಹೊರಗೆ ಬಂದ ಬಳಿಕವೂ ಇದೇ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕ ಉಸ್ಮಾನ್ ಕಲ್ಲಾಪು, ಬಜಪೆ ಚಲೋದಲ್ಲಿ ಪ್ರಚೋದನಕಾರಿ ಭಾಷಣ ಮಾಡಿ, ಕೊಲ್ಲಬೇಕು ಎಂದು ಸಿನಿಮಾದ ಶೈಲಿಯಲ್ಲಿ ಹೇಳಿಕೆ ನೀಡಿರುವವರನ್ನು ಮೊದಲು ಬಂಧಿಸಲಿ. ಯಾರ ಜೀವ ಹೋಗಬಾರದು ದ.ಕನ್ನಡ ಜಿಲ್ಲೆ ಶಾಂತಿಯುತವಾಗಿ ಇರಬೇಕೆಂಬ ಉದ್ದೇಶ ನಮ್ಮದು. ನಾವು ಕಾಂಗ್ರೆಸ್ ನಾಯಕರೇ, ನಮ್ಮದೇ ಸರ್ಕಾರ ಇದೆ. ಪೋಲಿಸ್ ಇಲಾಖೆಗೆ ಆದೇಶ ಕೊಟ್ಟು ತಪ್ಪು ಮಾಡಿದವರನ್ನು ಬಂಧಿಸಲಿ ಎಂದರು.

ಫೇಸ್ ಬುಕ್‌ನಲ್ಲಿ ಬರೆದರೆ ಬಂಧಿಸುತ್ತಾರೆ. ನಮಗೆ ಸಪೋರ್ಟ್ ಮಾಡುವುದು ಬೇಡ. ನಮಗೆ ನ್ಯಾಯ ಕೊಡಿ ಅಷ್ಟೆ. ಸದ್ಯ ಜಿಲ್ಲೆಗೆ ಹೊಸ ಪೊಲೀಸ್ ಅಧಿಕಾರಿಗಳು ಬಂದಿದ್ದಾರೆ. ಅವರ ಮೇಲೆ ವಿಶ್ವಾಸ ಇದೆ ಎಂದರು.