


ಡೈಲಿ ವಾರ್ತೆ: 15/JUNE/2025


ಕಬ್ಬಿಣದ ಸೇತುವೆ ಕುಸಿತ| ಇಬ್ಬರು ಸಾವು, ಹಲವರು ಕೊಚ್ಚಿಹೋಗಿರುವ ಶಂಕೆ!

ಪುಣೆ: ಇಂದ್ರಯಾಣಿ ನದಿ ಮೇಲಿನ ಕಬ್ಬಿಣದ ಸೇತುವೆ ಕುಸಿದು ದುರಂತ ಸಂಭವಿಸಿರುವ ಘಟನೆ ಇಂದು ಪುಣೆಯ ಮಾವಲ್ ತಾಲೂಕಿನಲ್ಲಿ ನಡೆದಿದೆ. ಸದ್ಯದ ಮಾಹಿತಿ ಪ್ರಕಾರ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು, ಹಲವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಭಾರೀ ನೀರು ಹರಿದುಬರುತ್ತಿತ್ತು. ಆದರೆ ಸೇತುವೆ ಕುಸಿದಾಗ ಮಳೆ ಇರಲಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
“ಪ್ರಾಥಮಿಕ ಮಾಹಿತಿಯ ಪ್ರಕಾರ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಆದರೆ ಕೆಲವರು ನೀರಿನಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆ ಇದೆ. ಈಗಾಗಲೇ ಐದರಿಂದ ಆರು ಜನರನ್ನು ರಕ್ಷಿಸಲಾಗಿದೆ ಮತ್ತು ತಪಾಸಣೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ” ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡಗಳು ಮತ್ತು ಅಗ್ನಿಶಾಮಕ ದಳ ಸೇರಿದಂತೆ ಇತರ ವಿಶೇಷ ರಕ್ಷಣಾ ಘಟಕಗಳ ಸಿಬ್ಬಂದಿ ಸ್ಥಳದಲ್ಲಿದ್ದು ಕಾರ್ಯಾಚರಣೆ ಕೈಗೊಂಡಿದ್ದಾರೆ. ಭಾನುವಾರ ರಜೆ ಕಾರಣ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು ಎಂದು ಅಧಿಕಾರಿ ಹೇಳಿದ್ದಾರೆ.
ಸೇತುವೆ ಕುಸಿತ ದುರಂತದಲ್ಲಿ ಇಬ್ಬರು ಮೃತಪಟ್ಟು, 32 ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ರವಾನಿಸಲಾಗಿದ್ದು, ಆರು ಜನರ ಸ್ಥಿತಿ ಗಂಭೀರವಾಗಿದೆ. ಈವರೆಗೆ ಆರು ಜನರನ್ನು ರಕ್ಷಿಸಲಾಗಿದೆ. ವಿಭಾಗೀಯ ಆಯುಕ್ತರು ಘಟನಾ ಸ್ಥಳಕ್ಕೆ ತೆರಳುತ್ತಿದ್ದಾರೆ. ಎಲ್ಲ ರಕ್ಷಣಾ ತಂಡಗಳಿಗೆ ಅಲರ್ಟ್ ಇರುವಂತೆ ಸೂಚಿಸಲಾಗಿದೆ ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನಾವಿಸ್ ಮಾಹಿತಿ ನೀಡಿದ್ದಾರೆ.