ಡೈಲಿ ವಾರ್ತೆ: 16/JUNE/2025

ದೇರಳಕಟ್ಟೆ ವ್ಯೆದ್ಯಕೀಯ ಕಾಲೇಜಿನ 140 ವಿದ್ಯಾರ್ಥಿಗಳಿದ್ದ ಹಾಸ್ಟೆಲ್ ಕಟ್ಟಡದಲ್ಲಿ ಬೆಂಕಿ – ಸ್ಥಳೀಯರಿಂದ ರಕ್ಷಣೆ

ಉಳ್ಳಾಲ: ಖಾಸಗಿ ಸಂಸ್ಥೆಯ ವಿದ್ಯಾರ್ಥಿಗಳಿದ್ದ ದೇರಳಕಟ್ಟೆ ಜಂಕ್ಷನ್ನಿನಲ್ಲಿರುವ ಕಟ್ಟಡದಲ್ಲಿ ವಿದ್ಯುತ್ ಶಾರ್ಟ್​ ಸರ್ಕ್ಯೂಟ್ ನಿಂದ ಆಕಸ್ಮಿಕ ಬೆಂಕಿ ತಗಲಿದ್ದು, ಕಟ್ಟಡದೊಳದ್ದ 140 ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿದೆ. ಸ್ಥಳೀಯರು ಬೆಂಕಿಯನ್ನು ನಂದಿಸುವಲ್ಲಿ ಸಫಲರಾಗಿದ್ದಾರೆ.

ವೇಣುಗೋಪಾಲ್ ಶೆಟ್ಟಿ ಎಂಬವರಿಗೆ ಸೇರಿದ ವೆಂಕಟ್ ರೆಸಿಡೆನ್ಸಿ ಐದು ಮಹಡಿಯ ಕಟ್ಟಡದ ಕೆಳಗಿನ ಮಹಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ. ನಂತರ ಬೆಂಕಿ ಹರಡಲು ಆರಂಭವಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಸ್ಥಳೀಯರು ಎದುರುಗಡೆಯಿದ್ದ ಪೆಟ್ರೋಲ್ ಪಂಪ್ ನಿಂದ ಬೆಂಕಿ ನಂದಿಸಲು ಉಪಯೋಗಿಸುವ ಸಾಮಗ್ರಿಗಳ ಸಹಾಯದಿಂದ ಬೆಂಕಿ ನಂದಿಸಲು ಆರಂಭಿಸಿದ್ದಾರೆ.
ತಕ್ಷಣ ಕಟ್ಟಡದ ಮೇಲಿದ್ದ 140 ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಹೊರ ತಂದಿದ್ದಾರೆ.

ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳ ತಡವಾಗಿ ಆಗಮಿಸಿದ್ದರಿಂದಾಗಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು. ಅದಾಗಲೇ ಭಾಗಶ: ಬೆಂಕಿಯನ್ನು ನಂದಿಸುವಲ್ಲಿ ಸ್ಥಳೀಯರು ಸಫಲರಾಗಿದ್ದು, ವಿದ್ಯಾರ್ಥಿಗಳರೆಲ್ಲರನ್ನೂ ಶಿಕ್ಷಣ ಸಂಸ್ಥೆ ಬೇರೆ ವಿದ್ಯಾರ್ಥಿ ನಿಲಯಗಳಿಗೆ ಸ್ಥಳಾಂತರಿಸಿದ್ದಾರೆ.