



ಡೈಲಿ ವಾರ್ತೆ: 16/JUNE/2025


ಬಂಟ್ವಾಳ: ನಾಪತ್ತೆಯಾಗಿದ್ದ ವಿವಾಹಿತ ವ್ಯಕ್ತಿಯ ಮೃತದೇಹ ರಸ್ತೆ ಬದಿಯ ಹೊಂಡದಲ್ಲಿ ಪತ್ತೆ

ಬಂಟ್ವಾಳ : ನಾಪತ್ತೆಯಾಗಿದ್ದ ವಿವಾಹಿತ ವ್ಯಕ್ತಿಯ ಮೃತದೇಹ ರಸ್ತೆ ಬದಿಯ ಹೊಂಡದಲ್ಲಿ ಸೋಮವಾರ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಅಮ್ಮುಂಜೆ ಗ್ರಾಮದ ಬೆಂಜನಪದವು ನಿವಾಸಿ ಜನಾರ್ದನ ಪೂಜಾರಿ ಅವರ ಪುತ್ರ ಸಾಗರ್ (28) ಎಂದು ಹೆಸರಿಸಲಾಗಿದೆ.
ಪೈಟಿಂಗ್ ಕೆಲಸ ಮಾಡಿಕೊಂಡಿದ್ದ ಸಾಗರ್ ಶನಿವಾರ ಜೂನ್ 14 ರಂದು ತನ್ನ ಪತ್ನಿ ಬೇಬಿ ಹಾಗೂ ಮಕ್ಕಳೊಂದಿಗೆ ಬಿ.ಸಿ.ರೋಡಿಗೆ ಔಷಧಿ ತರಲೆಂದು ಅಟೋ ರಿಕ್ಷಾದಲ್ಲಿ ತೆರಳಿದ್ದರು. ವಾಪಾಸು ಬರುವಾಗ ಬೆಂಜನಪದವು ಮೂರು ಮಾರ್ಗ ಎಂಬಲ್ಲಿ ಸಾಗರ್ ಇಳಿದಿರುತ್ತಾರೆ. ಬಳಿಕ ಮನೆಗೆ ಬರದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಸೋಮವಾರ ಬೆಳಿಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಸೋಮವಾರವೇ ಇಲ್ಲಿನ ವಿದ್ಯಾನಗರ ರಸ್ತೆಯ ಹೈಸ್ಕೂಲ್ ರೋಡ್ ಬಳಿ ಮೃತದೇಹ ಕಂಡು ಬಂದಿದ್ದು, ಈ ಬಗ್ಗೆ ಮಾಹಿತಿ ಪಡೆದ ಮೃತರ ತಂದೆ ಜನಾರ್ದನ ಪೂಜಾರಿ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಸಾಗರ್ ಮೃತದೇಹ ಎಂದು ದೃಢಪಡಿಸಿದ್ದಾರೆ. ಹೊಂಡದಲ್ಲಿ ಬಿದ್ದು ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಅವರು ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.