ಡೈಲಿ ವಾರ್ತೆ: 17/JUNE/2025

ಕೋಣಿ ಗ್ರಾ. ಪಂ. ನಲ್ಲಿ ಜನಪ್ರತಿನಿಧಿಗಳ ದರ್ಪ – ಚಪ್ಪಲು ಹಾಕಿ ಕಚೇರಿ ಒಳಗೆ ಹೋಗಿದ್ದ ಪತ್ರಕರ್ತೆಗೆ ಹಲ್ಲೆಗೆ ಯತ್ನ!

ಕುಂದಾಪುರ: ಗ್ರಾಮ ಪಂಚಾಯತ್ ಕಚೇರಿ ಒಳಗೆ ಚಪ್ಪಲಿ ಧರಿಸಿ ಹೋಗಿದ್ದ ಪತ್ರಕರ್ತೆಗೆ ಪಂಚಾಯತ್ ಉಪಾಧ್ಯಕ್ಷ ಹಾಗೂ ಸದಸ್ಯರು ತೀವ್ರ ಆಕ್ಷೇಪವೊಡ್ಡಿ ಹಲ್ಲೆಗೆ ಯತ್ನಿಸಿದ ಘಟನೆ ಕುಂದಾಪುರ ತಾಲೂಕಿನ ಕೋಣಿ ಗ್ರಾಮ ಪಂಚಾಯತ್ ನಲ್ಲಿ ಮಂಗಳವಾರ ನಡೆದಿದೆ ಎನ್ನಲಾಗಿದೆ.

ಪತ್ರಕರ್ತೆಯೋರ್ವರು ಪರಿಶಿಷ್ಟ ಜಾತಿ / ಪಂಗಡಗಳ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಕಾರ್ಯಕ್ರಮದ ಬಗ್ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಂದಿಗೆ ಮಾತನಾಡಲು ಹೋಗಿದ್ದರು. ಈ ಸಂದರ್ಭದಲ್ಲಿ ಅಲ್ಲಿದ್ದ ಜನಪ್ರತಿನಿಧಿಗಳು ಚಪ್ಪಲಿ ಹಾಕಿಕೊಂಡು ಒಳಗೆ ಬಂದಿದ್ದೀರಿ ಎಂದು ಆಕ್ಷೇಪಿಸಿದರು. ಕಚೇರಿಯೊಳಗೆ ಅಧಿಕಾರಿಗಳನ್ನು ಹೊರತುಪಡಿಸಿ ಇತರರಿಗೆ ಚಪ್ಪಲಿಯೊಂದಿಗೆ ಪ್ರವೇಶವಿಲ್ಲ ಎಂಬ ವಿಷಯವನ್ನು ಆಕೆಗೆ ಮನದಟ್ಟು ಮಾಡಿಸುವಾಗ ಮಾತಿನ ಚಕಮಕಿ ನಡೆಯಿತು.
ಇದರಿಂದಾಗಿ ಸ್ವಲ್ಪ ಹೊತ್ತು ಗೊಂದಲ ಉಂಟಾಯಿತು.

ಪತ್ರಕರ್ತರೊಂದಿಗೆ ಈ ರೀತಿಯಾಗಿ ವರ್ತಿಸುತ್ತಿರುವ ಜನಪ್ರತಿನಿಧಿಗಳು ಜನಸಾಮಾನ್ಯರೊಂದಿಗೆ ಯಾವ ರೀತಿ ವರ್ತಿಸಬಹುದೆಂಬ ಅನುಮಾನ ಮೂಡಿದೆ ಎಂದು ಪತ್ರಕರ್ತೆ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕ್ಷುಲ್ಲಕ ಕಾರಣಕ್ಕೆ ಜನಪ್ರತಿನಿಧಿಗಳು ನನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆಕೆ ಕುಂದಾಪುರ ಠಾಣೆಯಲ್ಲಿ ದೂರು ನೀಡಿದ್ದಾರೆ.