ಡೈಲಿ ವಾರ್ತೆ: 21/JUNE/2025

ಕ್ರಾಸ್‌ಲ್ಯಾಂಡ್‌ ಕಾಲೇಜು ಯೋಗ ದಿನಾಚರಣೆ – 79ರ ಇಳಿವಯಸ್ಸಿನಲ್ಲೂ ಯೋಗ ಪ್ರಾತ್ಯಕ್ಷಿಕೆ ನೀಡಿ ಗಮನ ಸೆಳೆದ ಸತೀಶ ಕುಮಾರ್‌ಶೆಟ್ಟಿ ಯಡ್ತಾಡಿ

ಬ್ರಹ್ಮಾವರ : ತನ್ನ 72ರ ಇಳಿವಯಸ್ಸಿನಲ್ಲೂ ಎಲ್ಲರನ್ನೂ ನಾಚಿಸುವಂತೆ ಪ್ರಾಣಾಯಾಮ, ತ್ರಿಕೋನಾಸನ, ಮತ್ಸ್ಯಾಸನ, ಭುಜಂಗಾಸನ, ಪದ್ಮಾಸನ, ಧ್ಯಾನ ಹಾಗೂ ಇನ್ನಿತರ ಆಸನಗಳನ್ನು ಲೀಲಾಜಾಲವಾಗಿ ಮಾಡಿ ವಿದ್ಯಾರ್ಥಿ ಸಮೂಹವನ್ನು ಗಮನ ಸೆಳೆದು, ವಿದ್ಯಾರ್ಥಿಗಳಿಗೂ ಯೋಗಾಸನದ ಮಹತ್ವ ಮತ್ತು ಪ್ರಾತ್ಯಕ್ಷಿಕೆಯನ್ನು ಪ್ರಗತಿಪರ ಕೃಷಿಕ ಹಾಗೂ ಯೋಗಗುರು ಯಡ್ತಾಡಿಯ ಸತೀಶ ಕುಮಾರ್‌ಶೆಟ್ಟಿ ತೋರಿಸಿಕೊಟ್ಟರು.

ಬ್ರಹ್ಮಾವರದ ಕ್ರಾಸ್‌ಲ್ಯಾಂಡ್‌ಕಾಲೇಜಿನಲ್ಲಿ ಶನಿವಾರ ಕಾಲೇಜಿನ ಎನ್‌.ಎಸ್‌.ಎಸ್‌ಘಟಕದ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಯೋಗ ದಿನದಂದು ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಯೊಂದಿಗೆ ಯೋಗದ ಮಹತ್ವ ತಿಳಿಸಿ ಮಾತನಾಡಿದರು.

ಯೋಗ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು. ಪ್ರತಿ ದಿನ ಯೋಗ ಮಾಡಿದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸುತ್ತದೆ ಮತ್ತು ಯೋಗದಿಂದ ರೋಗ ದೂರವಾಗುತ್ತದೆ. ಯೋಗ ಭಾರತದ ಪ್ರಾಚೀನ ಸಂಪ್ರದಾಯದ ಒಂದು ಅತ್ಯಮೂಲ್ಯ ಕೊಡುಗೆಯಾಗಿದೆ. ಇದು ಮನಸ್ಸು ಮತ್ತು ದೇಹದ ಐಕ್ಯತೆಯನ್ನು ಸಾಕಾರಗೊಳಿಸಿದೆ. ಇದು ಒಬ್ಬ ಮನುಷ್ಯನ ಶಾರೀರಿಕರವಾದ, ಚೇತನಾತ್ಮಕವಾದ ಭೌದ್ಧಿಕವಾದ. ಭಾವನಾತ್ಮಕವಾದ, ಮಾನಸಿಕ ಮತ್ತು ಆಧ್ಯಾತ್ಮಿಕವಾದ ಎಲ್ಲಾ ಸ್ತರಗಳಲ್ಲಿಯೂ ಕಲಸ ಮಾಡುತ್ತದೆ. ಇದು ಇಂದಿನ ಮತ್ತು ಭವಿಷ್ಯದ ಅಗತ್ಯವೂ ಆಗಿದೆ ಎಂದರು.
ವಿಶ್ವದ ಅನೇಕ ಕಡೆ ಭೌತಿಕ ಮತ್ತು ಸಾಂಸ್ಕೃತಿಕ ದಾಳಿಗಳಿಂದಾಗಿ ಬಹುತೇಕ ಮಾನವ ಸಮುದಾಯಗಳು ತಮ್ಮ ಪ್ರಾಚೀನ ಚಿಂತನೆಗಳನ್ನು ಮರೆಯುವಂತಾಯಿತು. ಭಾರತದ ಭಾಗ್ಯವೆಂದರೆ, ನಮ್ಮ ಮೇಲೆ ನಡೆದ ಎಲ್ಲ ಬಗೆಯ ದಾಳಿಗಳ ಹೊರತಾಗಿಯೂ ಈ ಮಣ್ಣಿನ ಮಹಿಮೆಯೋ ಎಂಬಂತೆ ಪ್ರಾಚೀನ ಕಾಲದ ಚಿಂತನೆಗಳು ಉಳಿದುಕೊಂಡು ಬಂದಿವೆ ಎಂಬುದು. ಅವುಗಳಲ್ಲಿ ಕೆಲವಂತೂ ನಾವು ಬದುಕಿರುವ ಈ ಕಾಲದಲ್ಲಿ ಇನ್ನಷ್ಟು ಹೊಳಪನ್ನು ಪಡೆದುಕೊಂಡು ಪ್ರವರ್ಧಮಾನಕ್ಕೆ ಬರುತ್ತಿವೆ. ಅದರಲ್ಲಿ ಯೋಗಶಾಸ್ತ್ರವೂ ಸೇರಿದೆ ಎಂದು ಅವರು ತಿಳಿಸಿದರು.
ಕಾಲೇಜಿನ ಉಪಪ್ರಾಂಶುಪಾಲ ಬಿಜು ಜೇಕಬ್‌ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ವಿಮಲಾ ಎಸ್‌ಶೆಟ್ಟಿ, ಕಾಲೇಜಿನ ಕಚೇರಿ ಮುಖ್ಯಸ್ಥ ಅಬ್ರಹಾಂ ಚಾಕೋ, ಸಿಬ್ಬಂದಿ ಸತೀಶ ನಾಯ್ಕ, ರೆನಿಟಾ, ಸುಧೀಂದ್ರ, ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಎ.ಶೇಷಗಿರಿ ಭಟ್‌, ನವೀನ್‌ಕುಮಾರ್‌ಶೆಟ್ಟಿ, ರಾಜು ಜೇಕಬ್‌, ಮಮತಾ, ರೂಪಾ, ಶ್ವೇತಾ ಮತ್ತು ಮಂಗಳ ಇದ್ದರು.
ವಿದ್ಯಾರ್ಥಿನಿ ಮರ್ಲಿನ್‌ಸ್ವಾಗತಿಸಿದರು. ಉಪನ್ಯಾಸಕಿ ಸುಪ್ರಿತಾ ವಂದಿಸಿದರು.