



ಡೈಲಿ ವಾರ್ತೆ: 24/JUNE/2025


ಬಂಟ್ವಾಳ| ದೇರಾಜೆ ಘಟನೆಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿ ಪ್ರಸಾರ, ಮತ್ತೊಂದು ಆನ್ ಲೈನ್ ನ್ಯೂಸ್ ವೆಬ್ ಪೋರ್ಟಲ್ ವಿರುದ್ದ ಪ್ರಕರಣ ದಾಖಲು!

ಬಂಟ್ವಾಳ : ಸಜಿಪನಡು ಗ್ರಾಮದ ದೇರಾಜೆಯಲ್ಲಿ ಇತ್ತೀಚೆಗೆ ನಡೆದ ಘಟನೆಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿ ಪ್ರಸಾರ ಮಾಡಿದ ಆರೋಪದಲ್ಲಿ ಮತ್ತೊಂದು ಆನ್ ಲೈನ್ ನ್ಯೂಸ್ ವೆಬ್ ಪೋರ್ಟಲ್ ವಿರುದ್ದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಡಿನಾಡ ಧ್ವನಿ.ಆನ್ ಲೈನ್ ಎಂಬ ವೆಬ್ ನ್ಯೂಸ್ ಚಾನಲ್ ವೊಂದರಲ್ಲಿ “ಕರಾವಳಿಯಲ್ಲಿ ಮತ್ತೆ ಮುಂದುವರಿದ ತಲವಾರು ದಾಳಿ, ಸಜೀಪದಲ್ಲಿ ಕೆಲಸ ಬಿಟ್ಟು ಮನೆಗೆ ತೆರಳುತ್ತಿದ್ದ ಇಬ್ಬರು ಅಮಾಯಕ ಮುಸ್ಲಿಮರ ಮೇಲೆ ದಾಳಿ” ಎಂಬ ತಲೆಬರಹವಿರುವ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿರುವುದು ಕಂಡುಬಂದಿದ್ದು, ಸದ್ರಿ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿ, ಸಾರ್ವಜನಿಕ ವಲಯದಲ್ಲಿ ಭಯ ಬೀತಿಯನ್ನುಂಟು ಮಾಡಿದ ವೆಬ್ ನ್ಯೂಸ್ ಚಾನಲ್ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಅಪರಾಧ ಕ್ರಮಾಂಕ 80/2025, ಕಲಂ 240 ಬಿ ಎನ್ ಎಸ್ ಪ್ರಕಾರ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸುಳ್ಳು ಸುದ್ದಿ ಪ್ರಸಾರ ಮಾಡುವವರ ವಿರುದ್ದ ಮುಂದಿನ ದಿನಗಳಲ್ಲೂ ಕಾನೂನು ಕ್ರಮ ಮುಂದುವರಿಯಲಿದೆ ಎಂದು ದ.ಕ.ಜಿಲ್ಲಾ ವರಿಷ್ಠಾಧಿಕಾರಿ ಕೆ ಅರುಣ್ ಅವರು ತಿಳಿಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿ ಪ್ರಸಾರದ ಆರೋಪದಲ್ಲಿ ಶನಿವಾರ ಡಿ ಟಿವಿ ಕನ್ನಡ ಎಂಬ ನ್ಯೂಸ್ ಚಾನಲ್ ಲಿಂಕ್ ವಿರುದ್ದವೂ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.