



ಡೈಲಿ ವಾರ್ತೆ: 26/JUNE/2025


ಗಾಜಾ| ಯೋಧರಿದ್ದ ವಾಹನದ ಮೇಲೆ ಹಮಾಸ್ ದಾಳಿ: ಇಸ್ರೇಲ್‌ನ 7 ಸೈನಿಕರ ಸಾವು

ಜೆರುಸಲೇಂ: ದಕ್ಷಿಣ ಗಾಜಾದ ಖಾನ್ ಯೂನಿಸ್‌ನಲ್ಲಿ
ಇಸ್ರೇಲ್ ಯೋಧರಿದ್ದ ಶಸ್ತ್ರಸಜ್ಜಿತ ವಾಹನದ ಮೇಲೆ ಹಮಾಸ್ ಬಂಡುಕೋರರು ಮಂಗಳವಾರ ನಡೆಸಿದ ದಾಳಿಯಲ್ಲಿ ಏಳು ಯೋಧರು ಮೃತಪಟ್ಟಿದ್ದಾರೆ.
ದಾಳಿಕೋರರು ಸೇನೆಯ ವಾಹನದಲ್ಲಿ ಬಾಂಬ್ ಇರಿಸಿದ್ದರು. ಅದು ಸ್ಫೋಟಗೊಂಡ ಪರಿಣಾಮ ಯೋಧರು ಮೃತಪಟ್ಟಿದ್ದಾರೆ’ ಎಂದು ಇಸ್ರೇಲ್ ಸೇನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಾಜಾದಲ್ಲಿ ಇಸ್ರೇಲ್ ಸೈನಿಕರನ್ನು ಗುರಿಯಾಗಿಸಿ ನಡೆದ ದೊಡ್ಡ ದಾಳಿಗಳಲ್ಲಿ ಒಂದಾಗಿದೆ. 2023ರ ಅಕ್ಟೋಬರ್ 7ರಂದು ಹಮಾಸ್ ಜತೆಗಿನ ಸಂಘರ್ಷ ಆರಂಭವಾದಾಗಿನಿಂದ ಇಸ್ರೇಲ್‌ನ 860 ಯೋಧರು ಮೃತಪಟ್ಟಿದ್ದಾರೆ. ಇದರಲ್ಲಿ 400 ಸೈನಿಕರು ಹಮಾಸ್ ಜತೆ ಗಾಜಾದಲ್ಲಿ ನಡೆದ ಹೋರಾಟದಲ್ಲಿ ಬಲಿಯಾಗಿದ್ದಾರೆ.
‘ಗಾಜಾ ಪಟ್ಟಿಯ ಕಟ್ಟಡವೊಂದರಲ್ಲಿ ಇದ್ದ ಇಸ್ರೇಲ್ ಸೈನಿಕರ ಮೇಲೂ ದಾಳಿ ನಡೆಸಿದ್ದೇವೆ’ ಎಂದು ಹಮಾಸ್‌ನ ಮಿಲಿಟರಿ ವಿಭಾಗ ಅಲ್ ಖಸ್ಸಾಂ ಬ್ರಿಗೇಡ್ ತನ್ನ ಟೆಲಿಗ್ರಾಂ ಚಾನೆಲ್‌ನಲ್ಲಿ ಹೇಳಿದೆ.
‘ಯಾಸಿನ್-105’ ಕ್ಷಿಪಣಿ ಬಳಸಿ ಕಟ್ಟಡದ ಮೇಲೆ ದಾಳಿ ನಡೆಸಿದಾಗ ಕೆಲವು ಸೈನಿಕರು ಮೃತಪಟ್ಟು, ಮತ್ತೆ ಕೆಲವರು ಗಾಯಗೊಂಡಿದ್ದಾರೆ. ಅಲ್ ಖಸ್ಸಾಂ ಹೋರಾಟಗಾರರು ಆ ಬಳಿಕ ಮೆಷಿನ್ ಗನ್ ಬಳಸಿ ಸೈನಿಕರಿಗೆ ಗುಂಡು ಹಾರಿಸಿದ್ದಾರೆ ಎಂದು ತಿಳಿಸಿದೆ. ಖಾನ್ ಯೂನಿಸ್‌ನಲ್ಲಿ ಗುಂಡೇಟಿನಿಂದ ಒಬ್ಬ ಸೈನಿಕ ಗಂಭೀರವಾಗಿ ಗಾಯಗೊಂಡದ್ದಾಗಿ ಇಸ್ರೇಲ್ ಸೇನೆ ಹೇಳಿದೆ.