ಡೈಲಿ ವಾರ್ತೆ: 05/ಜುಲೈ/2025

ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್​ ಜಾರಕಿಹೊಳಿ ಪುತ್ರ: ಪ್ರಕರಣ ದಾಖಲು

ಬೆಳಗಾವಿ: ಮಾಜಿ ಸಚಿವ, ಗೋಕಾಕ್ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಪುತ್ರ ಸಂತೋಷ್ ಜಾರಕಿಹೊಳಿ ಸಾರ್ವಜನಿಕವಾಗಿ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿರುವ ವಿಡಿಯೋ ವೈರಲ್ ಆಗಿದೆ.

ಗೋಕಾಕ್​ನ ಲಕ್ಷ್ಮಿ ದೇವಿ ಜಾತ್ರೆಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಸಂತೋಷ ಜಾರಕಿಹೊಳಿ ಭಾಗಿಯಾಗಿದ್ದರು. ಈ ವೇಳೆ ಬಂದೂಕು ಹಿಡಿದು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದೇ ವೇಳೆ ಅವರ ಬೆಂಬಲಿಗರು ಜೈಕಾರ ಕೂಗಿ ಸಂಭ್ರಮಿಸಿರುವ ವಿಡಿಯೋ ವೈರಲ್ ಆಗಿದೆ.

ದೇವಸ್ಥಾನದ ಮುಂಭಾಗದಲ್ಲಿ ಜಾತ್ರೆಯಲ್ಲಿ ನೂರಾರು ಜನರ ನಡುವೆ ಹಾಗೂ ಪೊಲೀಸರ ಸಮ್ಮುಖದಲ್ಲೇ ಫೈರಿಂಗ್ ಮಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಗೋಕಾಕ್ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.

ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಗೋಕಾಕ್ ಶಹರ್​ ಪೊಲೀಸರು ಸಂತೋಷ ಜಾರಕಿಹೊಳಿ ವಿರುದ್ಧ ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದಾರೆ.