ಡೈಲಿ ವಾರ್ತೆ: 05/ಜುಲೈ/2025

ಚಿಟ್ಟಿಬೆಟ್ಟು ಕೊರಗ ಕಾಲೋನಿ 8 ಹೊಸಮನೆ ನಿರ್ಮಾಣಕ್ಕೆ ಕರ್ನಾಟಕ ಬ್ಯಾಂಕ್ ಅವರಿಂದ 10 ಲಕ್ಷ ದೇಣಿಗೆ: ಮಾನ್ಯ ಶಾಸಕರಿಂದ ಹೊಸಮನೆ ನಿರ್ಮಾಣದ ಕಾಮಗಾರಿ ಪರಿಶೀಲನೆ

ಕೋಟ: ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಟ್ಟಿಬೆಟ್ಟು ಕೊರಗ ಕಾಲೋನಿಯಲ್ಲಿ ನಿರ್ಮಾಣಗೊಳ್ಳುತ್ತಿರುವ 8 ಹೊಸಮನೆ ನಿರ್ಮಾಣಕ್ಕೆ ಕರ್ನಾಟಕ ಬ್ಯಾಂಕ್ ಅವರಿಂದ 10 ಲಕ್ಷ ದೇಣಿಗೆಯನ್ನು ಶನಿವಾರ ಬ್ಯಾಂಕಿನ ಎಜಿಎಂ ವಾದಿರಾಜ ಭಟ್ ಕೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಪರಿಶಿಷ್ಟ ಪಂಗಡದ 8 ಹೊಸ ಮನೆ ನಿರ್ಮಾಣದ ಕಾಮಗಾರಿ ಪರಿಶೀಲನೆ ನಡೆಸಿದರು.
ಅವರು ಮಾತನಾಡಿ ಕೊರಗ ಜನಾಂಗದವರು ನಾ ನೋಡಿದ ಹಾಗೆ ಅತ್ಯಂತ ಮುಗ್ಧ ಜನಾಂಗದವರು ಬೇರೆ ಯಾರೂ ಕೂಡ ಇರಲಿಕ್ಕೆ ಇಲ್ಲ. ಒಂದು ಒಳ್ಳೆಯ ಉದ್ದೇಶ ಇಟ್ಟುಕೊಂಡು ಕೋಟತಟ್ಟು ಗ್ರಾಮ ಪಂಚಾಯಿತಿನ ಮುತುವರ್ಜಿಯಿಂದ ಕರ್ಣಾಟಕ ಬ್ಯಾಂಕಿನವರ ಸಹಕಾರದೊಂದಿಗೆ ಹಾಗೂ ಈ ಭಾಗದ ದಾನಿಗಳ ಮೂಲಕ ಒಂದು ಉತ್ತಮವಾಗಿ ಗಟ್ಟಿಮುಟ್ಟಾದ ಸೌಲಭ್ಯವುಳ್ಳ ಮನೆಗಳನ್ನು ನಿರ್ಮಿಸಿ ಕೊಡುತ್ತಿರುವುದು ಶ್ಲಾಘನೀಯ.

ಈ ಬಗ್ಗೆ ಗ್ರಾಮ ಪಂಚಾಯತಿನವರಿಗೂ ಕರ್ಣಾಟಕ ಬ್ಯಾಂಕಿನವರೆಗೂ, ದಾನಿಗಳಿಗೆ ಕ್ಷೇತ್ರದ ಶಾಸಕರಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಫಲಾನುಭವಿಗಳಿಗೆ ಕರ್ಣಾಟಕ ಬ್ಯಾಂಕ್ ನವರ ಕೂಡ ಮಾಡಿದ ಚೆಕ್ ವಿತರಣೆ ಮಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸದ್ರಿ ಈ ಕಾರ್ಯಕ್ರಮದಲ್ಲಿ ಉದ್ಯಮಿ ಆನಂದ್ ಸಿ ಕುಂದರ್, ಕರ್ನಾಟಕ ಬ್ಯಾಂಕಿನ ಎಜಿಎಂ ವಾದಿರಾಜ್ ಭಟ್, ಕೋಟತಟ್ಟು ಗ್ರಾಮ ಪಂಚಾಯಿತಿನ ಅಧ್ಯಕ್ಷ ಸತೀಶ್ ಕುಂದರ್ ಬಾರಿಕೆರೆ, ಉಪಾಧ್ಯಕ್ಷೆ ಸರಸ್ವತಿ,ಹಾಗೂ ಗ್ರಾಮ ಪಂಚಾಯಿತಿನ ಸದಸ್ಯರುಗಳಾದ ವಾಸು ಪೂಜಾರಿ, ರವೀಂದ್ರ ತಿಂಗಳಾಯ, ರಾಬರ್ಟ್ ರೋಡ್ರಿಗ್ರಸ್,ವಿದ್ಯಾ ಸಾಲಿಯಾನ್, ಸೀತಾ ಹಾಗೂ ಕೊರಗ ಸಮುದಾಯದ ಮುಖಂಡರಾದ ಗಣೇಶ್, ಮತ್ತು ಗ್ರಾಮಸ್ಥರು, ಕೊರಗ ಕಾಲೋನಿಯ ನಿವಾಸಿಗಳು ಉಪಸ್ಥಿತರಿದ್ದರು.