ಡೈಲಿ ವಾರ್ತೆ: 08/ಜುಲೈ/2025

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಕಮೆಂಟ್: ಪೊಲೀಸರಿಗೆ ದೂರು ನೀಡಿದ ಕಾಂಗ್ರೆಸ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನಿಯಮಿತ ವೈದ್ಯಕೀಯ ತಪಾಸಣೆಗಾಗಿ ಸೋಮವಾರ ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವಿಚಾರವಾಗಿ ಪ್ರಕಟವಾಗಿರುವ ಸುದ್ದಿಗಳಿಗೆ ಕಿಡಿಗೇಡಿಗಳು ಕೆಟ್ಟದಾಗಿ ಕಮೆಂಟ್ ಮಾಡಿದ ಕಾರಣ ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಸಮಿತಿ ಪೊಲೀಸರಿಗೆ ದೂರು ನೀಡಿದೆ.

ಸಿದ್ದರಾಮಯ್ಯ ಸಾವಿನ ಬಗ್ಗೆ ಪ್ರಸ್ತಾಪಿಸಿ ಅವಹೇಳನಕಾರಿಯಾಗಿ ಕಮೆಂಟ್ ಮಾಡಲಾಗಿದೆ. ಮುಖ್ಯಮಂತ್ರಿಗಳ ವಿರುದ್ಧ ಅಶ್ಲೀಲ ಪದಗಳಿಂದ ನಿಂದನೆ ಮಾಡಲಾಗಿದೆ ಎಂದು ಪೀಣ್ಯ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಕಮಿಟಿಯ ಕುಶಾಲ್ ಹರುವೇಗೌಡ ಹಾಗೂ ಸಂಜಯ್ ಎಂಬವರು ದೂರು ನೀಡಿದ್ದಾರೆ.

ದೂರಿನಲ್ಲೇನಿದೆ?
ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಕುರಿತು ದಿನಾಂಕ 7-7-2025ರಂದು ‘‘ದಿಢೀರ್ ಆಸ್ಪತ್ರೆಗೆ ತೆರಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ’’ ಎಂದು ಖಾಸಗಿ ವಾಹಿನಿಯಲ್ಲಿ ಬಿತ್ತರವಾದ ಸುದ್ದಿಯ ಫೇಸ್​​​ಬುಕ್ ಪೋಸ್ಟ್​ಗೆ ಮುಖ್ಯಮಂತ್ರಿಯ ಸಾವನ್ನು ಬಯಸುವ ಹೇಳಿಕೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕಿರುವ ಇಂತಹ ವಿಕೃತ ಮನಸ್ಸಿನ ವ್ಯಕ್ತಿಗಳು ಮಾಡುವ ಅಪಪ್ರಚಾರದ ಸುಳ್ಳು ವದಂತಿ ಹಾಗೂ ದಿಕ್ಕು ತಪ್ಪಿಸುವ ಹೇಳಿಕೆಗಳಿಂದ ರಾಜ್ಯದ ಜನರಿಗೆ, ಸಿದ್ದರಾಮಯ್ಯ ನವರ ಅಭಿಮಾನಿಗಳಿಗೆ ಹಾಗೂ ಲಕ್ಷಾಂತರ ಕಾರ್ಯಕರ್ತರಿಗೆ ತೀವ್ರ ಸ್ವರೂಪದ ನೋವು ಉಂಟಾಗಿರುತ್ತದೆ. ಇದರಿಂದ ಕಾನೂನಿನ ಸುವ್ಯವಸ್ಥೆ ಮೇಲೆ ಪರಿಣಾಮ ಬೀರುವುದು ಹಾಗೂ ಶಾಂತಿ ಕದಡುವ ಇಂತಹ ಕಿಡಿಗೇಡಿಗಳ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣ ದಾಖಲಿಸಿ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇವೆ. ಸಂಬಂಧಿಸಿದ ಎಲ್ಲಾ ದಾಖಲಾತಿಗಳ ಸ್ಕ್ರೀನ್​ಶಾಟ್​​ಗಳ ನಕಲು ಪ್ರತಿಗಳನ್ನು ದೂರಿನೊಂದಿಗೆ ಲಗತ್ತಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.