


ಡೈಲಿ ವಾರ್ತೆ: 09/ಜುಲೈ/2025


ಇಂದು ʻಭಾರತ್ ಬಂದ್ʼ ದೇಶಾದ್ಯಂತ 25 ಕೋಟಿ ಕಾರ್ಮಿಕರಿಂದ ಮುಷ್ಕರ, ಬೆಂಗ್ಳೂರಲ್ಲೂ ಪ್ರತಿಭಟನೆ

ನವದೆಹಲಿ: ಕೇಂದ್ರದ ಕಾರ್ಮಿಕ-ರೈತ ವಿರೋಧಿ ಕ್ರಮಗಳು ಹಾಗೂ ಕಾರ್ಪೊರೇಟ್ ಪರ ನಿಲುವು ಖಂಡಿಸಿ ಇಂದು (ಬುಧವಾರ) ಭಾರತ್ ಬಂದ್‌ಗೆ 10ಕ್ಕೂ ಹೆಚ್ಚು ಸಂಘಟನೆಗಳು ಕರೆ ನೀಡಿವೆ.
ಬ್ಯಾಂಕಿಂಗ್, ಇನ್ಶುರೆನ್ಸ್, ಪೋಸ್ಟ್, ಗಣಿ, ಹೆದ್ದಾರಿ ಕಾರ್ಮಿಕರು ಸೇರಿದಂತೆ 25 ಕೋಟಿಗೂ ಅಧಿಕ ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರು ಬಂದ್‌ನಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಆದರೆ, ರಾಜ್ಯಕ್ಕೆ ಭಾರತ್ ಬಂದ್ ಬಿಸಿ ತಟ್ಟುವ ಸಾಧ್ಯತೆ ಕಡಿಮೆ ಇದೆ. ರಾಜ್ಯದಲ್ಲಿ ಶಾಲಾ ಕಾಲೇಜುಗಳು, ಮೆಟ್ರೋ, ಬಸ್ ಸಂಚಾರ, ಖಾಸಗಿ ಕಂಪನಿಗಳು ಇರಲಿವೆ. ಆದರೆ, ಬ್ಯಾಂಕಿಂಗ್ ಸೇವೆಯಲ್ಲಿ ಸ್ವಲ್ಪ ವ್ಯತ್ಯಯವಾಗುವ ಸಾಧ್ಯತೆ ಇದೆ.
ಕಳೆದ ವರ್ಷ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ ವಿವರವಾದ 17 ಅಂಶಗಳ ಬೇಡಿಕೆ ಪಟ್ಟಿಯನ್ನು ಸಲ್ಲಿಸಿದ್ದರೂ, ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಕಂಡುಬಂದಿಲ್ಲ ಎಂದು ಒಕ್ಕೂಟಗಳು ಹೇಳಿವೆ. ಸರ್ಕಾರ ದೇಶದ ಕಲ್ಯಾಣ ರಾಜ್ಯ ಸ್ಥಾನಮಾನವನ್ನು ಕೈಬಿಟ್ಟಿದೆ. ಅದು ವಿದೇಶಿ ಮತ್ತು ಭಾರತೀಯ ಕಾರ್ಪೊರೇಟ್‌ಗಳ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದೆ. ಇದು ತೀವ್ರವಾಗಿ ಅನುಸರಿಸುತ್ತಿರುವ ನೀತಿಗಳಿಂದ ಸ್ಪಷ್ಟವಾಗಿದೆ ಎಂದು ಯೂನಿಯನ್ ಫೋರಂ ಹೇಳಿಕೆಯಲ್ಲಿ ತಿಳಿಸಿದೆ.
ಕರ್ನಾಟಕದಲ್ಲಿ ಭಾರತ ಬಂದ್ ಎಫೆಕ್ಟ್ ಇಲ್ಲದಿದ್ದರೂ ಉತ್ತರ ಭಾರತದ ಹಲವೆಡೆ ಬಂದ್ ಆಗುವ ಸಾಧ್ಯತೆ ಇದೆ. ಇನ್ನು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಾಳೆ ಕಾರ್ಮಿಕ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಯಲಿದೆ.
ಬೆಂಗಳೂರಿನಲ್ಲಿ ಪ್ರತಿಭಟನೆಗೆ ಕೆರೆ:
ಇನ್ನೂ ದೇಶವ್ಯಾಪಿ ಪ್ರತಿಭಟನೆ ಹಿನ್ನೆಲೆ ಬೆಂಗಳೂರಿನಲ್ಲೂ AITUC, CITU, HMS, INTUC, SEWA ಸೇರಿ ವಿವಿಧ ಕಾರ್ಮಿಕ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿವೆ. ಅದರಂತೆ ಫ್ರೀಡಂ ಪಾರ್ಕ್ ನಲ್ಲಿ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ ನಡೆಲಿದೆ. ರಾಮನಗರ, ಬೆಂಗಳೂರು ಗ್ರಾಮಾಂತರ ಭಾಗದ ಕಾರ್ಮಿಕರೂ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.
ಬಿಹಾರದಲ್ಲಿ ಆರ್‌ಜೆಡಿ ಕಾರ್ಯಕರ್ತರಿಂದ ರೈಲು ತಡೆ
ಬಿಹಾರ ಮತ್ತು ಬಂಗಾಳದಲ್ಲಿ ಭಾರತ್ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿವೆ. ಆರ್‌ಜೆಡಿ ವಿದ್ಯಾರ್ಥಿ ಸಂಘಟನೆಗಳು ರೈಲು ತಡೆದು ಪ್ರತಿಭಟನೆ ನಡೆಸಿದ್ದಾರೆ. ಇನ್ನೂ ಬಂಗಾಳದಲ್ಲಿ ರಸ್ತೆ ತಡೆ, ಅಂಗಡಿ ಮುಂಗಟ್ಟುಗಳನ್ನ ಹಲವೆಡೆ ಬಂದ್ ಮಾಡಲಾಗಿದ್ದು, ಸಾರ್ವಜನಿಕ ಸೇವೆಗಳಲ್ಲಿ ಭಾರೀ ವ್ಯತ್ಯಯ ಕಂಡುಬಂದಿದೆ.
ಬೇಡಿಕೆಗಳೇನು?
- ನಾಲ್ಕು ಕಾರ್ಮಿಕ ಸಂಹಿತೆ ರದ್ದುಗೊಳಿಸಬೇಕು
- ಕೇಂದ್ರ ಸರ್ಕಾರ ತಂದಿರುವ ನಾಲ್ಕು ಸಂಹಿತೆಗಳನ್ನು ತಿರಸ್ಕರಿಸಬೇಕು
- ಕನಿಷ್ಠ ವೇತನ ಜಾರಿಗೊಳಿಸಬೇಕು
- ಕೇಂದ್ರ ತಂದಿರುವ ನಿಯಮದಲ್ಲಿ ಸಂಘ ರಚಿಸುವ ಹಕ್ಕು ಕಸಿದುಕೊಳ್ಳಲಾಗಿದೆ
- ಇದನ್ನು ರಾಜ್ಯ ಸರ್ಕಾರ ವಾಪಾಸ್ ಪಡೆಯಬೇಕು
- ಹೊಸ ಸಂಘ ರಚಿಸಲು ಅನುಮತಿ ನೀಡಬೇಕು
- ಕೆಲಸದ ಅವಧಿಯನ್ನು 12 ಗಂಟೆಯಿಂದ 8ಗಂಟೆಗೆ ಕಡಿತಗೊಳಿಸಬೇಕು
- ಗುತ್ತಿಗೆ ನೌಕರಿ ರದ್ದುಗೊಳಿಸಿ ಖಾಯಂ ನೌಕರಿ ಜಾರಿಯಾಗಬೇಕು
ಏನಿರುತ್ತೆ? ಏನಿರಲ್ಲ?
– ಕೈಗಾರಿಕೆಗಳು ಬಹುತೇಕ ಬಂದ್ .
– ಕೆಲ ಬ್ಯಾಂಕ್ ಗಳಲ್ಲಿ ಸೇವೆ ವ್ಯತ್ಯಯ
– ಎಲ್ಲಾ ಬ್ಯಾಂಕ್ ಗಳು ಕ್ಲೋಸ್ ಇರಲ್ಲ.
– ಬ್ಯಾಂಕ್ ಒಟ್ಟು 8 ಯೂನಿಯನ್ ಇದೆ, ಅದ್ರಲ್ಲಿ 3 ಟ್ರೇಡ್ ಯೂನಿಯನ್ ಬೆಂಬಲ ಇದೆ.
– ವಿಮೆ ಕಚೇರಿ ಬಂದ್ ಸಾಧ್ಯತೆ.
– ಬಾಷ್, ಟೊಯೋಟಾ ಸೇರಿದಂತೆ ಪ್ರಮುಖ ಕೈಗಾರಿಕೆಗಳು ಬಂದ್.
– ಪೋಸ್ಟ್ ಆಫೀಸ್ ಇರಲಿದೆ.