ಡೈಲಿ ವಾರ್ತೆ: 10/ಜುಲೈ/2025

ಭಾರಿ ಮಳೆಯ ನಡುವೆ ದೆಹಲಿಯಲ್ಲಿ 4.4 ತೀವ್ರತೆಯ ಭೂಕಂಪ: ಜನರಲ್ಲಿ ಆತಂಕ

ನವದೆಹಲಿ: ಒಂದು ಕಡೆ ಭಾರಿ ಮಳೆ ಸುರಿಯುತ್ತಿದ್ದರೆ, ಮತ್ತೊಂದು ಕಡೆ ಗುರುವಾರ ಬೆಳಗ್ಗೆ ದೆಹಲಿ ಮತ್ತು ಹತ್ತಿರದ ಪ್ರದೇಶಗಳಲ್ಲಿ 4.4 ತೀವ್ರತೆಯ ಭೂಕಂಪದ ಅನುಭವವಾಗಿದೆ. ಇದು ದೆಹಲಿಗರನ್ನು ಆತಂಕಕ್ಕೆ ದೂಡಿದೆ. ಹರಿಯಾಣದ ಜಜ್ಜರ್‌ನಲ್ಲಿ ಇಂದು ಬೆಳಗ್ಗೆ 9:04 ಕ್ಕೆ 4.4 ತೀವ್ರತೆಯ ಭೂಕಂಪ ಸಂಭವಿಸಿದೆ. ದೆಹಲಿ – ಎನ್‌ಸಿಆರ್‌ನಲ್ಲಿ ಬಲವಾದ ಕಂಪನ ಆಗಿದೆ ಎಂದು ತಿಳಿದು ಬಂದಿದೆ.

ಭೂಮಿ ನಡುಗಿದ್ದು, ನಮ್ಮ ಅನುಭವಕ್ಕೆ ಬಂತು.. ನಿಜಕ್ಕೂ ಭಯಾನಕವಾಗಿತ್ತು, ನನ್ನ ವಾಹನವು ಇದ್ದಕ್ಕಿದ್ದಂತೆ ನಡುಗಿತು ಎಂದು ದೆಹಲಿಯ ವ್ಯಕ್ತಿಯೊಬ್ಬರು ತಮಗಾದ ಅನುಭವ ಹಂಚಿಕೊಂಡಿದ್ದಾರೆ ಎಂದು ಎಎನ್​ಐ ವರದಿ ಮಾಡಿದೆ. ಇನ್ನೊಬ್ಬ ದೆಹಲಿ ನಾಗರಿಕ ಈ ಬಗ್ಗೆ ಮಾತನಾಡಿದ್ದು, ಭೂಮಿ ನಡುಗಿತು, ಇದರಿಂದ ನಮಗೆ ಸ್ವಲ್ಪ ಭಯವಾಯ್ತು ಎಂದಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ಮತ್ತೊಂದು ಕಡೆ ದೆಹಲಿಯಲ್ಲಿ ಭಾರಿ ಮಳೆ: ಮತ್ತೊಂದು ಕಡೆ ರಾಜಧಾನಿ ದೆಹಲಿ ಮತ್ತು NCR ನಲ್ಲಿ ಬುಧವಾರ ಸಂಜೆಯಿಂದ ಮಳೆ ಸುರಿಯುತ್ತಿದೆ. ಈ ಮಳೆ ಈ ಮಾನ್ಸೂನ್‌ನಲ್ಲಿ ಅತ್ಯಂತ ಹೆಚ್ಚಿನ ಮಳೆಯಾಗಿದೆ. ಸುಮಾರು ಒಂದು ಗಂಟೆಗಳ ಕಾಲ ಈ ರಣಮಳೆ ಸುರಿದಿದೆ. ಈ ಧಾರಾಕಾರ ಮಳೆಯು ದೇಶದ ರಾಜಧಾನಿಯ ಜನರನ್ನು ಸಂಕಷ್ಟದ ಪರಿಸ್ಥಿತಿಗೆ ದೂಡಿದೆ. ಈ ಮಳೆ ದೆಹಲಿಯ ಜನರಿಗೆ ಬಿಸಿಲಿನ ಬೇಗೆಯಿಂದ ಪರಿಹಾರ ನೀಡಿದ್ದರೂ, ಅನೇಕ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.

ಹೆದ್ದಾರಿಗಳಿಂದ ಇಂದಿರಾಗಾಂಧಿ ವಿಮಾನ ನಿಲ್ದಾಣದವರೆಗೆ, ದೊಡ್ಡ ದೊಡ್ಡ ರಸ್ತೆಗಳಿಂದ ಜನರ ಬೀದಿಗಳವರೆಗೆ, ಎಲ್ಲೆಡೆ ರಸ್ತೆಗಳು ಜಲಾವೃತಗೊಂಡಿರುವುದು ಕಂಡುಬರುತ್ತಿದೆ. ವಾಹನಗಳು ಮತ್ತು ಪಾದಚಾರಿಗಳು ಇಬ್ಬರೂ ನೀರಿನಿಂದ ತುಂಬಿದ ರಸ್ತೆಗಳಲ್ಲಿ ಸಿಲುಕಿಕೊಂಡಿರುವುದು ಕಂಡುಬರುತ್ತದೆ. ಅನೇಕ ಪ್ರದೇಶಗಳ ಸ್ಥಿತಿ ನದಿಯಂತೆ ಮಾರ್ಪಟ್ಟಿವೆ.