


ಡೈಲಿ ವಾರ್ತೆ: 10/ಜುಲೈ/2025


ಮುರ್ಡೇಶ್ವರ| ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ದೋಣಿ ಮಗುಚಿ ಓರ್ವ ಸಾವು, ಇನ್ನೊರ್ವ ನಾಪತ್ತೆ- ಇಬ್ಬರು ಪಾರು

ಭಟ್ಕಳ: ಮೀನುಗಾರಿಕೆಗೆ ತೆರಳಿದ್ದ ವೇಳೆ ದೋಣಿ ಮಗುಚಿ ಓರ್ವ ಮೃತಪಟ್ಟು, ಮತ್ತೋರ್ವ ನಾಪತ್ತೆಯಾಗಿರುವ ಘಟನೆ ಜು.10ರ ಗುರುವಾರ ಮುರ್ಡೇಶ್ವರದಲ್ಲಿ ನಡೆದಿದೆ.
ಜನಾರ್ಧನ ಎ. ಹರಿಕಾಂತ ಎಂಬವರಿಗೆ ಸೇರಿದ ಗೆಲ್ನೇಟ್
ದೋಣಿಯಲ್ಲಿ ಜು.10 ರಂದು ಗುರುವಾರ ಬೆಳಿಗ್ಗೆ ಮುರ್ಡೇಶ್ವರದಿಂದ ನಾಲ್ವರು ಮೀನುಗಾರಿಕೆಗೆ ತೆರಳಿದ್ದ ವೇಳೆ ಸಮುದ್ರದ ಅಲೆಗೆ ದೋಣಿ ಮಗುಚಿ ನೀರುಪಾಲಾಗಿದ್ದಾರೆ.
ಘಟನೆಯಲ್ಲಿ ಮೃತಪಟ್ಟ ವ್ಯಕ್ತಿ ಮಾಧವ ಹರಿಕಾಂತ (45) ಎಂದು ಗುರುತಿಸಲಾಗಿದೆ.
ಇವರು ನೀರಿನಲ್ಲಿ ಮುಳುಗಿದ್ದು ತಕ್ಷಣ ಅವರನ್ನು ನೀರಿನಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಮೃತಪಟ್ಟರು.
ಇನ್ನೋರ್ವ ಮೀನುಗಾರ ವೆಂಕಟೇಶ ಅಣ್ಣಪ್ಪ ಹರಿಕಾಂತ (26) ಎಂಬವರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದು, ಅವರ ಶೋಧ ಕಾರ್ಯ ನಡೆದಿದೆ.
ಆನಂದ ಅಣ್ಣಪ್ಪ ಹರಿಕಾಂತ ಹಾಗೂ ಇನ್ನೋರ್ವ ಮೀನುಗಾರ ದಡ ಸೇರಿದ್ದು ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ವಿಷಯ ತಿಳಿದ ತಕ್ಷಣ ಮುರ್ಡೇಶ್ವರ ಠಾಣೆಯ ಪೊಲೀಸರು, ಕರಾವಳಿ ಕಾವಲು ಪಡೆಯ ಪೊಲೀಸರು ಹಾಗೂ ಮೀನುಗಾರರು, ನಾಗರೀಕರು ನಾಪತ್ತೆಯಾದವರ ಪತ್ತೆಗಾಗಿ ಕ್ರಮ ಕೈಗೊಂಡಿದ್ದಾರೆ.