ಡೈಲಿ ವಾರ್ತೆ: 10/ಜುಲೈ/2025

ಎಕ್ಸಲೆಂಟ್ ಪಿಯು ಕಾಲೇಜ್ ಸುಣ್ಣಾರಿಯಲ್ಲಿ ಗುರುವಂದನಾ ಕಾರ್ಯಕ್ರಮ: ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದಾಗ ಮಾತ್ರ ಗುರುಶಿಷ್ಯರಲ್ಲಿ ಬಾಂಧವ್ಯ ಹುಟ್ಟಿಕೊಳ್ಳಲು ಸಾಧ್ಯ – ವಿದ್ವಾನ್ ಮಾಧವ ಅಡಿಗ

ಕುಂದಾಪುರ: ಗುರು ಅನ್ನುವ ಶಬ್ದ ‘ಗು’ ಮತ್ತು ‘ರು’ ಅನ್ನುವ ಮೂಲ ಪದಗಳನ್ನು ಹೊಂದಿದೆ. ಸಂಸ್ಕೃತ ಭಾಷೆಯಲ್ಲಿ ‘ಗು’ ಅಂದರೆ ಅಂಧಕಾರ ಅಥವಾ ಅಜ್ಞಾನ. ‘ರು’ ಅಂದರೆ ದೂರ ಮಾಡುವ ಎಂದರ್ಥ. ಆದ್ದರಿಂದ ಗುರು ಅಂದರೆ ಅಂಧಕಾರ ಅಥವಾ ಅಜ್ಞಾನವನ್ನು ದೂರ ಮಾಡುವವರು ಎಂದರ್ಥ ಎಂದು ಸಂಸ್ಕೃತ ಭಾಷಾ ನಿವೃತ್ತ ಮುಖ್ಯೋಪಾಧ್ಯಾಯರಾದ ವಿದ್ವಾನ್ ಮಾಧವ ಅಡಿಗ ಹೇಳಿದರು.

ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಸುಣ್ಣಾರಿಯಲ್ಲಿ
ಜು. 10 ರಂದು ಗುರುವಾರ ಬೆಳಿಗ್ಗೆ ನಡೆದ ಗುರುಪೂರ್ಣಿಮೆ ಅಂಗವಾಗಿ ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ‘ಗುರು’ ಎಂದರೆ ಸಮಾಜದಲ್ಲಿರುವ ತಪ್ಪುಗಳನ್ನು ತಿದ್ದಿ, ಪ್ರತಿ ಮಕ್ಕಳಿಗೂ ಕಲಿಸುವವನು. ವಿದ್ಯಾರ್ಥಿಗಳಲ್ಲಿನ ಆತ್ಮವಿಶ್ವಾಸ ಹೆಚ್ಚಿಸಿದಾಗ ಮಾತ್ರ ಗುರುಶಿಷ್ಯರಲ್ಲಿ ಬಾಂಧವ್ಯ ಹುಟ್ಟಿಕೊಳ್ಳಲು ಸಾಧ್ಯ ಎಂದು ಹೇಳಿದರು.

ಇಂದು ಗುರು ಪೂರ್ಣಿಮೆ ಹಬ್ಬ. ಹಿಂದೂ ಪಂಚಾಂಗದ ಪ್ರಕಾರ ಆಷಾಢ ಮಾಸದ ಹುಣ್ಣಿಮೆಯನ್ನು ಹಿಂದೂಗಳು ಸಾಂಪ್ರದಾಯಿಕವಾಗಿ ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ. ಗುರುಪೂರ್ಣಿಮೆಯ ದಿನ ಗುರು ಸೂತ್ರದ ಪ್ರಭಾವ ಇತರ ದಿನಗಳಿಗಿಂತ ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ ಎನ್ನುವ ನಂಬಿಕೆ ಇದೆ.
ಬಹುತೇಕರು ಗುರುಗಳನ್ನು ತಮ್ಮ ಜೀವನದ ಅವಿಭಾಜ್ಯ ಅಂಗವೆಂದು ಪರಿಗಣಿಸುತ್ತಾರೆ. ಇನ್ನು, ಗುರುಪೂರ್ಣಿಮೆಗೆ ಧಾರ್ಮಿಕ ಪ್ರಾಮುಖ್ಯತೆಯ ಜತೆಗೆ ಶೈಕ್ಷಣಿಕ ಮಹತ್ವವೂ ಇದೆ. ಈ ದಿನ ಹಲವರು ತಮ್ಮ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಮತ್ತು ವಿದ್ವಾಂಸರನ್ನು ಸ್ಮರಿಸುವ ಮೂಲಕ ಆಚರಿಸುತ್ತಾರೆ.

ಇನ್ನೊಂದೆಡೆ, ಯೋಗ ಸಂಪ್ರದಾಯದಲ್ಲಿ ಈ ದಿನವನ್ನು ಶಿವನು ಸಪ್ತರ್ಷಿಗಳಿಗೆ ಯೋಗ ವಿದ್ಯೆಯನ್ನು ಧಾರೆಯೆರೆದು ಪ್ರಥಮ ಗುರು ಆದ ದಿನ ಎಂಬ ನಂಬಿಕೆಯಿಂದ ಆಚರಿಸುತ್ತಾರೆ. ಅಲ್ಲದೆ, ಶ್ರೇಷ್ಠ ಗುರುಗಳಲ್ಲಿ ಒಬ್ಬರಾದ ವೇದವ್ಯಾಸ ಮಹರ್ಷಿಗಳ ಜನ್ಮದಿನದ ಅಂಗವಾಗಿಯೂ ಈ ಹಬ್ಬವನ್ನು ಆಚರಿಸುತ್ತಾರೆ. ವೇದವ್ಯಾಸ ಮಹರ್ಷಿಗಳು ಈ ದಿನ ಹುಟ್ಟಿದ್ದಲ್ಲದೇ ಆಷಾಢ ಶುಕ್ಲ ಪಕ್ಷದಲ್ಲೇ ಬ್ರಹ್ಮಸೂತ್ರಗಳ ರಚನೆ ಪ್ರಾರಂಭಿಸಿದರು. ಈ ದಿನ ಆ ಶುಕ್ಲ ಪಕ್ಷ ಕೊನೆಗೊಳ್ಳುತ್ತದೆ. ಇದರ ಸ್ಮರಣಾರ್ಥಕವಾಗಿ ಈ ದಿನದಂದು ಬ್ರಹ್ಮಸೂತ್ರಗಳ ಪಠಣ ಮಾಡಲಾಗುತ್ತದೆ ಹಾಗೂ ಈ ದಿನವನ್ನು ವ್ಯಾಸ ಪೂರ್ಣಿಮೆ ಎಂದು ಕರೆಯಲಾಗುತ್ತದೆ. ಜತೆಗೆ, ಹಿಂದೂ ಧರ್ಮದ ಎಲ್ಲ ಅಧ್ಯಾತ್ಮಿಕ ಪರಂಪರೆಗಳಲ್ಲಿಯೂ ತಮ್ಮ ಗುರುಗಳಿಗೆ ಕೃತಜ್ಞತೆ ಸಲ್ಲಿಸುತ್ತ ಈ ಹಬ್ಬವನ್ನು ಅತ್ಯಂತ ಶ್ರದ್ದೆ ಭಕ್ತಿಯಿಂದ ಆಚರಿಸಲಾಗುತ್ತದೆ ಎಂದು ಮಾಧವ ಅಡಿಗ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಕ್ಸಲೆಂಟ್ ಸಂಸ್ಥೆಯ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ ವಹಿಸಿದ್ದರು. ಮುಖ್ಯೋಪಾಧ್ಯಾಯನಿ ಸರೋಜಿನಿ ಆಚಾರ್ಯ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯರಾದ ವಿದ್ವಾನ್ ಮಾಧವ ಅಡಿಗ ಅವರಿಗೆ ವಿದ್ಯಾರ್ಥಿಗಳು
ವಂದನಾರ್ಪಣೆಗೈದರು

ಈ ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶಿಕ್ಷಕ ಶ್ರೀನಿವಾಸ್ ವೈದ್ಯ, ಹಾಗೂ ಅಧ್ಯಾಪಕ ವೃಂದದವರು ಮತ್ತು ಮಕ್ಕಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶಿಕ್ಷಕ ಸಂದೀಪ್ ನಿರೂಪಿಸಿದರು.
ಶಿಕ್ಷಕಿ ಶ್ರೀಮತಿ ಚಂದನ ವಂದಿಸಿದರು.