ಡೈಲಿ ವಾರ್ತೆ: 11/ಜುಲೈ/2025

ರೀಲ್ಸ್‌ ಹುಚ್ಚಿನಿಂದ ಎಡವಟ್ಟು, ಸ್ಟಂಟ್‌ ಮಾಡ್ತಿದ್ದಾಗಲೇ 300 ಅಡಿ ಆಳದ ಕಂದಕಕ್ಕೆ ಬಿದ್ದ ಕಾರು – ಚಾಲಕ ಪಾರು!

ಮುಂಬೈ: ಸೋಷಿಯಲ್‌ ಮೀಡಿಯಾದಲ್ಲಿ ಈಗ ರೀಲ್ಸ್‌ ಹವಾ ಜಾಸ್ತಿಯಾಗಿದೆ. ಅದ್ರಲ್ಲೂ ಯುವಜನರು ಹೆಚ್ಚಿನ ವೀವ್ಸ್‌, ಲೈಕ್ಸ್‌ಗಾಗಿ ಕಂಡ ಕಂಡ ಸ್ಥಳಗಳಲ್ಲಿ ವೀಡಿಯೋ ಮಾಡೋದಕ್ಕೆ ಶುರು ಮಾಡಿದ್ದಾರೆ. ಯುವತಿಯರು ಹಸಿ ಬಿಸಿ ಬಟ್ಟೆಗಳನ್ನ ತೊಟ್ಟು ಪಡ್ಡೆಗಳ ನಿದ್ದೆಗೆಡಿಸಿದ್ರೆ, ಯುವಕರು ಬೈಕು, ಕಾರ್‌ಗಳಿಂದ ಸ್ಟಂಟ್‌ ಮಾಡಿ ಕ್ರೇಜ್‌ ಹೆಚ್ಚಿಸ್ತಿದ್ದಾರೆ. ಇದೇ ರೀತಿ ರೀಲ್ಸ್‌ ಮಾಡೋದಕ್ಕೆ ಹೋದಾಗ ದುರಂತವೊಂದು ಮಹಾರಾಷ್ಟ್ರದಲ್ಲಿ ನಡೆದಿದೆ.

ಮಹಾರಾಷ್ಟ್ರದ ಸತಾರ ಜಿಲ್ಲೆಯ ಪಠಾಣ್‌ ಸದಾವಘಾಪುರ ಪ್ರದೇಶದಲ್ಲಿ ರೀಲ್ಸ್‌ಗಾಗಿ ಸ್ಟಂಟ್‌ ಮಾಡುತ್ತಿದ್ದಾಗಲೇ ಕಾರು 300 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿರುವ ಘಟನೆ ನಡೆದಿದೆ. ಎದೆ ಝಲ್‌ ಎನಿಸುವ ಈ ದೃಶ್ಯ ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲೂ ವೈರಲ್‌ ಆಗಿದೆ.

ಪಠಾಣ್‌ ಸದಾವಘಾಪುರ ಗುಡ್ಡ ಪ್ರದೇಶಕ್ಕೆ ಯುವಕರ ಗುಂಪೊಂದು ಭೇಟಿ ನೀಡಿತ್ತು. ಈ ವೇಳೆ ಕಡಿದಾದ ಇಳಿಜಾರಿನಲ್ಲಿ ರೀಲ್ಸ್‌ಗಾಗಿ ಕಾರು ಸ್ಟಂಟ್‌ ಮಾಡಲು ಮುಂದಾಗಿದ್ರು. ರಿವರ್ಸ್‌ನಲ್ಲಿ ಒಂದು ಸುತ್ತುಹಾಕಿದ ಕಾರು ಇದ್ದಕ್ಕಿದ್ದಂತೆ 300 ಅಡಿ ಆಳದ ಕಂದಕಕ್ಕೆ ಉರುಳಿಬಿದ್ದಿತು. ಅದೃಷ್ಟವಶಾತ್‌ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾರು ಚಾಲನೆ ಮಾಡುತ್ತಿದ್ದ ಕರಾಡ್ ನಿವಾಸಿ ಸಾಹಿಲ್ ಅನಿಲ್ ಜಾಧವ್ (20) ಘಟನೆಯಲ್ಲಿ ಗಾಯಗೊಂಡಿದ್ದಾನೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದುಬಂದಿದೆ.

ಫೋಟೋ ಶೂಟ್‌ನಿಂದ ಉಳಿಯಿತು ನಾಲ್ವರ ಪ್ರಾಣ:
ಇನ್ನೂ ಕಾರಿನಲ್ಲಿದ್ದ ಇತರ ನಾಲ್ವರು ಅಪಘಾತ ಸಂಭವಿಸುವುದಕ್ಕೆ ಸ್ವಲ್ಪ ಸಮಯಕ್ಕೂ ಮುನ್ನ ಫೋಟೋಶೂಟ್‌ಗಾಗಿ ಹೊರ ಬಂದಿದ್ದರು. ಇದರಿಂದ ಆ ನಾಲ್ವರ ಜೀವವೂ ಉಳಿದಿದೆ.

ಘಟನೆ ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಅಲ್ಲದೇ ಸ್ಥಳೀಯರ ಸಹಾಯದಿಂದ ರಕ್ಷಣಾ ಕಾರ್ಯ ನಡೆಸಿದ್ದು, ಕಾರು ಚಾಲಕನನ್ನೂ ರಕ್ಷಣೆ ಮಾಡಲಾಗಿದೆ.