ಡೈಲಿ ವಾರ್ತೆ: 12/ಜುಲೈ/2025

ಅಹಮದಾಬಾದ್​ ವಿಮಾನ ದುರಂತಕ್ಕೆ ಕಾರಣ: ಇಂಜಿನ್​ಗೆ ಇಂಧನ ಪೂರೈಕೆ ಕಡಿತ – ತನಿಖಾ ವರದಿಯಲ್ಲಿ ಅಚ್ಚರಿಯ ಅಂಶ ಬಯಲು!

ನವದೆಹಲಿ: 270ಕ್ಕೂ ಅಧಿಕ ಜನರ ಸಾವಿಗೆ ಕಾರಣವಾಗಿದ್ದ ಅಹಮದಾಬಾದ್​ ವಿಮಾನ ದುರಂತದ ಕಾರಣ ಬಯಲಾಗಿದೆ. ಅಪಘಾತದ ಬಗ್ಗೆ ತನಿಖೆ ನಡೆಸಿದ್ದ ವಿಮಾನ ಅಪಘಾತಗಳ ತನಿಖಾ ಸಂಸ್ಥೆಯ (AAIB) ವರದಿ ಶುಕ್ರವಾರ ತಡರಾತ್ರಿ ಬಿಡುಗಡೆಯಾಗಿದೆ.

ವಿಮಾನ ಹಾರಿದ ಕೆಲವೇ ಸೆಕೆಂಡುಗಳಲ್ಲಿ ಎರಡು ಇಂಜಿನ್​ಗಳಿಗೆ ಇಂಧನ ಪೂರೈಕೆ ನಿಂತಿದೆ. ಅದರ ಸ್ವಿಚ್​​ಗಳು RUN ನಿಂದ CUT OFF ಆಗಿದ್ದವು. ಇದರಿಂದ ಇಂಧನ ಸರಬರಾಜಾಗದೆ, ವಿಮಾನ ಮೇಲೆಕ್ಕೆ ಹಾರಲು ಸಾಧ್ಯವಾಗಿಲ್ಲ ಎಂದು ತನಿಖಾ ವರದಿಯಲ್ಲಿ ಎಎಐಬಿ ತಿಳಿಸಿದೆ.

ಪೈಲಟ್​​ಗಳ ಮಾತುಕತೆ ರೆಕಾರ್ಡ್​: ವಿಮಾನ ದುರಂತಕ್ಕೀಡಾಗುವ ಮೊದಲು ಪೈಲಟ್​​ಗಳಿಬ್ಬರು ಮಾತನಾಡಿಕೊಂಡಿದ್ದು, ಬ್ಲ್ಯಾಕ್​​​ಬಾಕ್ಸ್​​ನಲ್ಲಿ ದಾಖಲಾಗಿದೆ. ಒಬ್ಬ ಪೈಲಟ್​ ‘ಇಂಧನವನ್ನು ಏಕೆ ಆಫ್​ ಮಾಡಿದ್ದೀರಿ’ ಎಂದು ಕೇಳುತ್ತಾರೆ. ಅದಕ್ಕೆ ಇನ್ನೊಬ್ಬ ಪೈಲಟ್​ ‘ನಾನು ಮಾಡಿಲ್ಲ’ ಎಂದು ಹೇಳುತ್ತಾರೆ. ಇಂಧನ ಸ್ವಿಚ್​​ಗಳನ್ನು ಮರುಚಾಲನೆ ಮಾಡಿದರೂ, ಅವು ಸಕ್ರಿಯವಾಗಿಲ್ಲ ಎಂದು ತನಿಖಾ ವರದಿ ಹೇಳಿದೆ.

ವಿಮಾನ ಟೇಕ್ ಆಫ್ ಆದ 30 ಸೆಕೆಂಡುಗಳ ನಂತರ ಭೀಕರವಾಗಿ ದುರಂತಕ್ಕೀಡಾಯಿತು. ಅಪಘಾತ ಸ್ಥಳದಲ್ಲಿ ಇಂಧನದ ಮಾದರಿಯನ್ನು ಸಂಗ್ರಹಿಸಿ ಡಿಜಿಸಿಎ (ನಾಗರಿಕ ವಿಮಾನಯಾನ ನಿರ್ದೇಶನಾಲಯ) ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಯಿತು. ಅದರಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ ಎಂದು ಎಎಐಬಿ ಮಾಹಿತಿ ನೀಡಿದೆ.

ವಿಮಾನವು 1:38:39 ಸೆಕೆಂಡ್​​ಗೆ ಟೇಕ್​​ಆಫ್​ ಆಯಿತು. 1:39:09 ಸೆಕೆಂಡ್​​ಗೆ ಅಪಘಾತಕ್ಕೀಡಾಗಿದೆ. 1:39:05 ಸೆಕೆಂಡ್​​ಗೆ ಪೈಲಟ್‌ಗಳಲ್ಲಿ ಒಬ್ಬರು ‘ಮೇಡೇ ಮೇಡೇ ಮೇಡೇ’ ಎಂದು ತುರ್ತು ಸಂದೇಶ ರವಾನಿಸಿದ್ದಾರೆ. ಇಷ್ಟು ಕಡಿಮೆ ಸಮಯದಲ್ಲಿ ಎಟಿಸಿಒ ಯಾವುದೇ ಪ್ರತಿಕ್ರಿಯೆಯನ್ನು ಪಡೆಯಲಿಲ್ಲ. ಅಷ್ಟರಲ್ಲಿ ವಿಮಾನ ನಿಲ್ದಾಣದ ಪಕ್ಕದ ಹಾಸ್ಟೆಲ್​ ಮೇಲೆ ಅಪ್ಪಳಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕಟ್​​ ಆಫ್​ ಆದ ಇಂಧನ ಸ್ವಿಚ್​ಗಳು: ಕಟ್​ ಆಫ್​​ ಆಗಿದ್ದ ಎರಡು ಸ್ವಿಚ್​ಗಳನ್ನು ಆನ್​ ಮಾಡಿದರೂ, ಒಂದು ಎಂಜಿನ್​​ಗೆ ಅಲ್ಪ ಪ್ರಮಾಣದಲ್ಲಿ ಇಂಧನ ಸಾಗಿದೆ. ಇನ್ನೊಂದಕ್ಕೆ ಸಂಪೂರ್ಣವಾಗಿ ಇಂಧನ ಸರಬರಾಜಾಗಿಲ್ಲ. 30 ಸೆಕೆಂಡುಗಳ ಒಳಗೆ ವಿಮಾನವು ಪತನಗೊಂಡಿದೆ. ದುರಂತದ ಸ್ಥಳದಲ್ಲಿ ಸಿಕ್ಕ ಅವಶೇಷಗಳನ್ನು ಸಂಗ್ರಹಿಸಿ, ಅವುಗಳನ್ನು ಮರು ಜೋಡಿಸಿ ತನಿಖೆ ಮಾಡಲಾಗಿದೆ. ಇಂಧನ ಪೂರೈಕೆ ಆಗದೇ ಇರುವುದು ದುರಂತಕ್ಕೆ ಪ್ರಮುಖ ಕಾರಣ ಎಂದು ತಿಳಿಸಿದೆ.

ಎಎಐಬಿ ಪ್ರಾಥಮಿಕವಾಗಿ ಸಿಕ್ಕ ಎಲ್ಲ ಆಧಾರಗಳ ಮೇಲೆ ಹೆಚ್ಚುವರಿ ವಿವರಗಳನ್ನು ಸಂಗ್ರಹಿಸುತ್ತಿದೆ. ಇಎಎಫ್​ಆರ್​ನಿಂದ ಡೌನ್‌ಲೋಡ್ ಮಾಡಲಾದ ದತ್ತಾಂಶವನ್ನು ವಿಶ್ಲೇಷಿಸಲಾಗುತ್ತಿದೆ. ತನಿಖೆಯ ಈ ಹಂತದಲ್ಲಿ, B787-8 ಮತ್ತು/ಅಥವಾ GE GEnx-1B ಎಂಜಿನ್ ನಿರ್ವಾಹಕರು ಮತ್ತು ತಯಾರಕರ ಮೇಲೆ ಯಾವುದೇ ಕ್ರಮ ಜರುಗಿಸುವ ಅಗತ್ಯವಿಲ್ಲ ಎಂದು ಹೇಳಿದೆ.

ವಿವಿಧ ಸಾಕ್ಷಿಗಳು ಮತ್ತು ಬದುಕುಳಿದ ಪ್ರಯಾಣಿಕರ ಹೇಳಿಕೆಗಳನ್ನು ತನಿಖಾಧಿಕಾರಿಗಳು ದಾಖಲಿಸಿದ್ದಾರೆ. ವಿಮಾನ ಸಿಬ್ಬಂದಿ ಮತ್ತು ಪ್ರಯಾಣಿಕರ ಮರಣೋತ್ತರ ಪರೀಕ್ಷೆಯ ವರದಿಗಳ ಸಂಪೂರ್ಣ ವಿಶ್ಲೇಷಣೆ ನಡೆಸಲಾಗುತ್ತದೆ. ತನಿಖಾ ತಂಡವು ಪಾಲುದಾರರಿಂದ ಪಡೆಯಲಾಗುತ್ತಿರುವ ಹೆಚ್ಚುವರಿ ಪುರಾವೆಗಳು, ದಾಖಲೆಗಳು ಮತ್ತು ಮಾಹಿತಿಯನ್ನು ಪರಿಶೀಲಿಸುತ್ತದೆ.

ವಿಮಾನದಲ್ಲಿ 230 ಪ್ರಯಾಣಿಕರಿದ್ದರು. ಅದರಲ್ಲಿ 15 ಪ್ರಯಾಣಿಕರು ಬಿಸಿನೆಸ್ ಕ್ಲಾಸ್‌ನಲ್ಲಿದ್ದರು. ಇಬ್ಬರು ಮಕ್ಕಳು ಸೇರಿ 215 ಪ್ರಯಾಣಿಕರು ಎಕಾನಮಿ ಕ್ಲಾಸ್‌ನಲ್ಲಿದ್ದರು. ಮುಖ್ಯ ಪೈಲಟ್ 15,638 ಗಂಟೆಗಳಿಗಿಂತ ಹೆಚ್ಚು ಹಾರಾಟದ ಅನುಭವವನ್ನು ಹೊಂದಿದ್ದರೆ, ಎರಡನೇ ಪೈಲಟ್​ 3,403 ಗಂಟೆಗಳಿಗಿಂತ ಹೆಚ್ಚು ಹಾರಾಟದ ಅನುಭವವನ್ನು ಹೊಂದಿದ್ದರು.

15 ಪುಟಗಳ ವರದಿಯ ಸಾರಾಂಶ ಹೀಗಿದೆ:
ಜೂನ್ 12ರಂದು ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್ವಿಕ್‌ಗೆ ಹೊರಟಿದ್ದ ಏರ್ ಇಂಡಿಯಾದ ಬೋಯಿಂಗ್ 787-8 ವಿಮಾನವು ಭೀಕರ ದುರಂತಕ್ಕೀಡಾದ ಕುರಿತು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ತನ್ನ ಪ್ರಾಥಮಿಕ ವರದಿಯನ್ನು ಪ್ರಕಟಿಸಿದೆ. 15 ಪುಟಗಳ ಈ ವರದಿಯಲ್ಲಿ ಹಲವು ಅಂಶಗಳನ್ನು ದಾಖಲಿಸಲಾಗಿದೆ. ಅದರ ಸಾರಾಂಶ ಇಲ್ಲಿದೆ.

  1. 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ವಿಮಾನದಲ್ಲಿದ್ದರು. 15 ಪ್ರಯಾಣಿಕರು ಬಿಸಿನೆಸ್ ಕ್ಲಾಸ್‌ನಲ್ಲಿದ್ದರು ಮತ್ತು ಇಬ್ಬರು ಮಕ್ಕಳು ಸೇರಿದಂತೆ 215 ಪ್ರಯಾಣಿಕರು ಎಕಾನಮಿ ಕ್ಲಾಸ್‌ನಲ್ಲಿದ್ದರು.

2. ವಿಮಾನದ ತೂಕ ಮತ್ತು ಇಂಧನ ಸಮತೋಲನವಾಗಿತ್ತು. ವಿಮಾನದಲ್ಲಿ 54,200 ಕೆಜಿ ಇಂಧನವಿತ್ತು. ಅದರ ತೂಕ 2,13,401 ಕೆಜಿಗಳಷ್ಟಿತ್ತು.
ಪೈಲಟ್​​ಗಳು ಇಂಧನ ಸ್ವಿಚ್​​ಗಳು ಆಫ್​ ಆದ ಬಗ್ಗೆ ಮಾತನಾಡುತ್ತಿರುವುದು ಕಾಕ್​​ಪಿಟ್​ ಆಡಿಯೋದಲ್ಲಿ ದಾಖಲಾಗಿದೆ.

  1. ವಿಧ್ವಂಸಕ ಕೃತ್ಯದ ಬಗ್ಗೆ ಯಾವುದೇ ಪುರಾವೆಗಳು ಇಲ್ಲ. ಇಂಧನ ಸ್ವಿಚ್​ ದೋಷದ ಬಗ್ಗೆ ಎಫ್​​ಎಎ ಈ ಮೊದಲೇ ಸಲಹೆ ನೀಡಿತ್ತು. ಇದನ್ನು ಏರ್​ ಇಂಡಿಯಾ ಪರಿಗಣಿಸಿರಲಿಲ್ಲ.
  2. ಇಬ್ಬರು ಪೈಲಟ್​​ಗಳಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ವಿಮಾನ ಹಾರಾಟದಲ್ಲಿ ಸೂಕ್ತ ತರಬೇತಿ ಪಡೆದಿದ್ದರು.
    ಆಕಾಶದಲ್ಲಿ ವಿಮಾನ ಹಾರಾಟಕ್ಕೆ ವಾತಾವರಣ ಸ್ವಚ್ಛಂದವಾಗಿತ್ತು. ಯಾವುದೇ ಪಕ್ಷಿ ಅಥವಾ ಹವಾಮಾನ ವೈಪರೀತ್ಯ ಅಪಘಡಕ್ಕೆ ಕಾರಣವಾಗಿಲ್ಲ.