ಡೈಲಿ ವಾರ್ತೆ: 12/ಜುಲೈ/2025

ಉಡುಪಿ| ಜುಲೈ 14 “ಕರಾವಳಿ ನೆಲದಲ್ಲಿ ಸೌಹಾರ್ದ ಸಂಚಾರ” ಮಸೀದಿಯಿಂದ ಚರ್ಚ್ ವರೆಗೆ ಕಾಲ್ನಡಿಗೆ ಜಾಥಾ

ಉಡುಪಿ: ಕರಾವಳಿ ಕರ್ನಾಟಕದಲ್ಲಿ ಕೋಮು ವೈಷಮ್ಯ ತೀವ್ರಗೊಳ್ಳುತ್ತಿದ್ದು, ಹಲ್ಲೆ, ಹತ್ಯೆಗಳು ಸಾಮಾನ್ಯವಾಗುತ್ತಿವೆ. ಈ ಹಿನ್ನೆಲೆಯಲ್ಲಿ
ಒಬ್ಬರನ್ನೊಬ್ಬರು ಅರಿತು, ಬೆರೆತು ಬದುಕುವ ಸಲುವಾಗಿ ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ’ (ಎಸ್ ವೈ ಎಸ್) ವಿಶಿಷ್ಟ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ ಎಂದು ಸೌಹಾರ್ದ ಸಂಚಾರ ಸಮಿತಿಯ ಅಧ್ಯಕ್ಷ ಅಡ್ವಕೇಟ್ ಹಂಝತ್ ಹೆಜಮಾಡಿ ಹೇಳಿದರು.

‘ಹೃದಯ ಹೃದಯಗಳನ್ನು ಬೆಸೆಯೋಣ’ ಎಂಬ ಘೋಷಣೆಯೊಂದಿಗೆ ಜುಲೈ 14,15,16 ರಂದು ಕುಂದಾಪುರದಿಂದ ಸುಳ್ಯ ತನಕ ಸರ್ವ ಮತೀಯರೂ ಜೊತೆಗೂಡಿ ಸಾಗುವ ‘ಕರಾವಳಿಯ ನೆಲದಲ್ಲಿ ಸೌಹಾರ್ದ ಸಂಚಾರ’ ಎಂಬ ಕಾರ್ಯಕ್ರಮವು ಸೌಹಾರ್ದ ಸಂದೇಶವನ್ನು ಸಮಾಜದ ಮುಂದೆ ತೆರೆದಿಡಲಿದೆ.

ಜುಲೈ 14ರ ಸೋಮವಾರ ಬೆಳಿಗ್ಗೆ, 8 ಗಂಟೆಗೆ ಕುಂದಾಪುರ ಅನ್ವಯಿದ್ ಯೂಸುಫ್ ವಲಿಯುಲ್ಲಾಹಿ ದರ್ಗಾ ಝಿಯಾರತ್ ನೊಂದಿಗೆ ಆರಂಭವಾಗುವ ಸೌಹಾರ್ದ ಸಂಚಾರವು ಬೆಳಿಗ್ಗೆ 9 ಗಂಟೆಗೆ ಕುಂದಾಪುರ ದರ್ಗಾದಿಂದ ಶಾಸ್ತ್ರಿ ಸರ್ಕಲ್ ತನಕ ಸೌಹಾರ್ದ ಕಾಲ್ನಡಿಗೆ,
11.30 ಗಂಟೆಗೆ ಬ್ರಹ್ಮಾವರದಲ್ಲಿ , ಮಧ್ಯಾಹ್ನ 12 ಗಂಟೆಗೆ ಉಡುಪಿ ಜಾಮಿಯಾ ಮಸೀದಿಯಿಂದ ಮದರ್ ಆಫ್ ಸೋರೋಸ್ ಚರ್ಚ್ ತನಕ ,
3.30 ಗಂಟೆಗೆ ಕಾರ್ಕಳ ಗ್ಯಾಲಕ್ಸಿ ಹಾಲ್ ನಿಂದ ಬಸ್ಸು ನಿಲ್ದಾಣದವರೆಗೆ ಸಂಜೆ 5:30 ಗಂಟೆಗೆ ಕಾಪು ಪೊಲಿವು ಜಾಮಿಯಾ ಮಸೀದಿಯಿಂದ ಕಾಪು ಪೇಟೆ ತನಕ ,ರಾತ್ರಿ 8 ಗಂಟೆಗೆ ಪಡುಬಿದ್ರಿ ಪೇಟೆಯಲ್ಲಿ ಸೌಹಾರ್ದ ಭಾಷಣ ನಡೆಯಲಿದೆ ಎಂದು ಹೇಳಿದರು.

ಸೌಹಾರ್ದ ಸಂಚಾರದಲ್ಲಿ ವಿವಿಧ ಮಠಗಳ ಸ್ವಾಮೀಜಿಗಳು, ಫಾದರ್ ಗಳು, ಮುಸ್ಲಿಂ ಧಾರ್ಮಿಕ ವಿದ್ವಾಂಸರು ಭಾಗವಹಿಸಲಿದ್ದಾರೆ ಎಂದರು.