


ಡೈಲಿ ವಾರ್ತೆ: 14/ಜುಲೈ/2025


ಕೋಟ| ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದಾಗಲೇ ಸೊಸೈಟಿಯಿಂದ ಮನೆ ಹರಾಜು- ಮನೆಯವರ ಆರೋಪ

ಕೋಟ: ಕೋಟತಟ್ಟು ಗ್ರಾಮದ ಬಾರಿಕೆರೆಯ ಮನೆಯೊಂದರಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದಾಗಲೇ ಮನೆಯನ್ನು ಸೊಸೈಟಿಯವರು ಹರಾಜು ಹಾಕಿದ್ದಾಗಿ ಮನೆಯವರು ಆರೋಪಿಸಿದ್ದಾರೆ.

ಬಾರಿಕೆರೆಯ ನಾಗೇಂದ್ರ ಪುತ್ರನ್, ತಂದೆ ಕೃಷ್ಣ ಬಂಗೇರ ಮತ್ತು ತಾಯಿ ಜಲಜಾ ಮರಕಾಲ್ತಿ ಅವರ ಕುಟುಂಬಕ್ಕೆ ಸೇರಿದ ಮನೆ ಇದಾಗಿದೆ. ಮನೆಯ ಜೊತೆಗೆ ಸುಮಾರು 45 ಸೆಂಟ್ಸ್ ನಷ್ಟು ಜಾಗೆ ಇಲ್ಲಿತ್ತು. ಜು.14 ರಂದು ಸೋಮವಾರ ಬೆಳಿಗ್ಗೆ ಕುಟುಂಬದ ಮನೆಯಲ್ಲಿ ತುಳಸಿ ಪೂಜೆ ಮತ್ತು ಭಜನಾ ಕಾರ್ಯಕ್ರಮ ಆಯೋಜನೆಯಾಗಿತ್ತು.
ಈ ವೇಳೆ ಸ್ಥಳೀಯ ಸೊಸೈಟಿಯವರು ನಮಗೆ ನೋಟೀಸನ್ನೂ ನೀಡದೆ ಏಕಾಏಕಿ ಹರಾಜು ಹಾಕಿದ್ದಾರೆ ಎಂದು ಕೃಷ್ಣ ಬಂಗೇರ ಪುತ್ರ ನಾಗೇಂದ್ರ ಪುತ್ರನ್ ಆರೋಪ ಮಾಡಿದ್ದಾರೆ.

ಈ ಮನೆಯು ಪಿತ್ರಾರ್ಜಿತ ಆಸ್ತಿಯಾಗಿದ್ದು
ಕುಟುಂಬದ ವ್ಯಕ್ತಿಯೋರ್ವ ಹಲವು ವರ್ಷಗಳ ಹಿಂದೆ ಸೊಸೈಟಿಯಿಂದ ಸಾಲ ಪಡೆಯುವಾಗ ಅವನ ಮನೆ ನಂಬರ್ ನ್ನು ನೀಡಿ ಪಿತ್ರಾರ್ಜಿತ ಆಸ್ತಿ ಪತ್ರವನ್ನು ಅಡವಿಟ್ಟು ಸೊಸೈಟಿ ಯಿಂದ ಸಾಲ ಪಡೆದಿದ್ದಾನೆ. ಆದರೆ ಸಾಲ ನೀಡುವಾಗ ಸೊಸೈಟಿಯವರು ಸ್ಥಳ ಪರಿಶೀಲನೆ ಮಾಡದೆ ಸಾಲ ನೀಡಿದ್ದಾರೆ. ಇದರಿಂದಾಗಿ ಎರಡು ಕುಟುಂಬಗಳು ಬೀದಿಪಾಲಗಿದೆ ಎಂದು ಬೇಸರ ವ್ಯಕ್ತ ಪಡಿಸಿದರು.

ಜುಲೈ 12 ರ ಶನಿವಾರದಂದು ಹರಾಜು ಪ್ರಕ್ರಿಯೆ ಇತ್ತು. ಆದರೆ ಅಂದು ಮಾಡಿರಲಿಲ್ಲ. ಇಂದು ಸೋಮವಾರ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ಇದ್ದಾಗ ಏಕಾಏಕಿ ಬ್ಯಾಂಕ್ ನವರು ನೊಟೀಸನ್ನೂ ನೀಡದೆ ಬಂದು ಹರಾಜು ಹಾಕಿದ್ದಾರೆ. ನ್ಯಾಯಾಲಯದ ಮೇಲೆ ನಮಗೆ ಗೌರವ ಇದೆ.
ಆದರೆ ಬ್ಯಾಂಕ್ ನವರ ಕ್ರಮದ ಬಗ್ಗೆ ನಾವು ಕಾನೂನು ಹೋರಾಟ ನಡೆಸುತ್ತೇವೆ. ಇದರ ಹಿಂದೆ ರಾಜಕೀಯ ಮುಖಂಡರ ಹಿತಾಸಕ್ತಿಗಳಿವೆ ಎಂದು ನಾಗೇಂದ್ರ ಪುತ್ರನ್
ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಾಧ್ಯಮದವರ ಮುಂದೆ ಮನೆ ಹಿರಿಯರಾದ ಕೃಷ್ಣ ಬಂಗೇರ ಮಾತನಾಡಿ ನಾವು ಬಹಳಷ್ಟು ವರ್ಷಗಳಿಂದ ಇಲ್ಲಿ ವಾಸ ಮಾಡುತ್ತಿದ್ದೇವೆ. ಇವತ್ತು ಈ ರೀತಿ ನಮಗೆ ಸಮಸ್ಯೆಯಾಗಿದೆ .ನಾವಿನ್ನು ಎಲ್ಲಿಗೆ ಹೋಗುವುದು? ನಮಗೆ ಬೇರೆ ಜಾಗ ಇಲ್ಲ. ನಮಗೆ ಅನ್ಯಾಯ ಆಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.