ಡೈಲಿ ವಾರ್ತೆ: 17/ಜುಲೈ/2025

ಕೊರಗ ಸಂಘಗಳ ಒಕ್ಕೂಟದಿಂದ ದ.ಕ. ಜಿಲ್ಲಾಧಿಕಾರಿಗಳ ಭೇಟಿ

ಮಂಗಳೂರು: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ನಿಯೋಗವು ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ದರ್ಶನ್ ಎಚ್. ವಿ. ರವರನ್ನು ಭೇಟಿ ಮಾಡಿತು.

ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿಯವರನ್ನು ಸ್ವಾಗತಿಸಲಾಯಿತು. ನಂತರ ಕೊರಗ ಸಮುದಾಯದ ಜಿಲ್ಲೆಯ ಪ್ರಮುಖ ಬೇಡಿಕೆಗಳಾದ ಕೃಷಿ ಯೋಗ್ಯ ಭೂಮಿ, ಸಮುದಾಯದ ಪೂರ್ವಿಕರ ಭೂಮಿ ಖಾತೆ ಬದಲಾವಣೆ, ಗ್ರಾಮ ಪಂಚಾಯತ್ ಶೇಕಡಾ 25 ರ ನಿಧಿಯ ಆಯ್ಕೆಯಲ್ಲಿ ಕೊರಗ ಸಮುದಾಯದವರಿಗೆ ಆದ್ಯತೆ, ಶಿಕ್ಷಣಕ್ಕೆ ಸಂಬಂಧಿಸಿದಂತೆ ಅರ್ಧದಲ್ಲಿ ಶಾಲಾ ಬಿಟ್ಟ ಮಕ್ಕಳಿಗೆ ಬ್ರಿಡ್ಜ್ ಕೋರ್ಸ್, ಟ್ಯೂಷನ್ ಸೆಂಟರ್, ಬೇಸಿಗೆ ಶಿಬಿರ ಮತ್ತು ಕ್ರೀಡಾಕೂಟ ಮುಂತಾದ ಕಾರ್ಯಕ್ರಮಗಳ ಮೂಲಕ ಕೊರಗ ಮಕ್ಕಳ ಶಿಕ್ಷಣದ ಗುಣಮಟ್ಟ ಹೆಚ್ಚಿಸುವಿಕೆ, ಕೊರಗ ಸಮುದಾಯದ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಶಾಸಕರ ಉಪಸ್ಥಿತಿಯಲ್ಲಿ ಜಿಲ್ಲಾಮಟ್ಟದ ಕೊರಗರ ಕುಂದುಕೊರತೆ ಸಭೆ ಮತ್ತು ತಾಲೂಕು ಮಟ್ಟದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಕುಂದು ಕೊರತೆ ಸಭೆ ನಡೆಸುವಂತೆ ಸೂಕ್ತ ಕ್ರಮ ಕೈಗೊಳ್ಳುವುದು ಮುಂತಾದ ಅನೇಕ ಸಮಸ್ಯೆಗಳ ಕುರಿತು ಚರ್ಚಿಸಿ ಮನವಿ ನೀಡಲಾಯಿತು.

ಜಿಲ್ಲಾಧಿಕಾರಿಯವರು ಒಕ್ಕೂಟದ ಮನವಿಗೆ ಸ್ಪಂದಿಸಿ ಶೀಘ್ರವೇ ಸಮುದಾಯಗಳ ಬೇಡಿಕೆಗಳನ್ನು ಪೂರೈಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಒಕ್ಕೂಟದ ನಿಯೋಗದಲ್ಲಿ ಅಧ್ಯಕ್ಷರಾದ ಸುಶೀಲ ನಾಡ, ಸಂಯೋಜಕರಾದ ಕೆ. ಪುತ್ರನ್ ಹೆಬ್ರಿ, ಬೊಗ್ರ ಕೊಕ್ಕರ್ಣೆ, ಶೀನ ಬೆಳ್ಮಣ್, ನರಸಿಂಹ ಪೆರ್ಡೂರು, ಸುಪ್ರಿಯ ಎಸ್. ಕಿನ್ನಿಗೋಳಿ, ಪ್ರೀತಿ ಹೆಬ್ರಿ, ನಾಗಿಣಿ ಶಿಮಂತೂರು, ಆಶಾ ಪಂಜಾ ಮತ್ತಿತರರು ಇದ್ದರು.