


ಡೈಲಿ ವಾರ್ತೆ: 17/ಜುಲೈ/2025


ಉಪ್ಪಿನಂಗಡಿ| ಕೌಟುಂಬಿಕ ಕಲಹ – ಪತ್ನಿಯನ್ನು ಚಾಕುವಿನಿಂದ ಇರಿದು ಕೊಂದ ಪತಿರಾಯ!

ಉಪ್ಪಿನಂಗಡಿ: ಮಗ ಮತ್ತು ಮಗಳ ಮುಂದೆಯೇ ಪತ್ನಿಯ ಎದೆಗೆ ಚಾಕುವಿನಿಂದ ಇರಿದು ಅಮಾನವೀಯವಾಗಿ ಹತ್ಯೆ ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಉಪ್ಪಿನಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯ ತೆಕ್ಕಾರು ಗ್ರಾಮದ ಬಾಜಾರು ಎಂಬಲ್ಲಿ ನಡೆದಿದೆ.
ಝೀನತ್ (40) ಕೊಲೆಗೀಡಾದ ಮಹಿಳೆಯಾಗಿದ್ದು ಪತಿ ರಫೀಕ್ (47) ಹತ್ಯೆಯ ಆರೋಪಿಯಾಗಿದ್ದಾನೆ.
ರಫೀಕ್ ಮತ್ತು ಝೀನತ್ ಅವರ ಮದುವೆ 18 ವರ್ಷದ ಹಿಂದೆ ನೆರವೇರಿತ್ತು. ವಿದೇಶದಲ್ಲಿ ಉದ್ಯೋಗದಲ್ಲಿದ್ದ ರಫೀಕ್ ಎರಡು ವರ್ಷಗಳ ಹಿಂದೆ ಅಲ್ಲಿನ ಉದ್ಯೋಗ ತ್ಯಜಿಸಿ ಊರಿಗೆ ಬಂದು ತೆಕ್ಕಾರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಂಪತಿಯ ಮಧ್ಯೆ ಕಳೆದ ಕೆಲವು ತಿಂಗಳಿಂದ ಮನಸ್ತಾಪ ಉಂಟಾಗಿತ್ತು. ಇಂದು ಬೆಳಗ್ಗೆ ಇಬ್ಬರ ಮಧ್ಯೆ ನಡೆದ ಜಗಳ ವಿಕೋಪಕ್ಕೆ ಹೋಗಿ ರಫೀಕ್ ಪತ್ನಿ ಝೀನತ್ ಳನ್ನು ಚಾಕುವಿನಿಂದ ಇರಿದಿದ್ದಾನೆ.
ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ಝೀನತ್ ಳನ್ನು ಸ್ಥಳೀಯರು ಮತ್ತು ಸಂಬಂಧಿಕರು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಝೀನತ್ ಮೃತ ಪಟ್ಟಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.