


ಡೈಲಿ ವಾರ್ತೆ: 19/ಜುಲೈ/2025


ಒಂದೇ ವೇದಿಕೆಗೆ ಚರ್ಚೆಗೆ ಬನ್ನಿ: ಬಿಜೆಪಿ-ಜೆಡಿಎಸ್‌ಗೆ ಸಿಎಂ ಸಿದ್ದರಾಮಯ್ಯ ಬಹಿರಂಗ ಸವಾಲು

ಮೈಸೂರು: ಜನರ ದಿಕ್ಕು ತಪ್ಪಿಸುವುದನ್ನು ನಿಲ್ಲಿಸಬೇಕಾದರೆ ನೀವು ಒಂದೇ ವೇದಿಕೆಗೆ ಚರ್ಚೆಗೆ ಬನ್ನಿ. ಅವರೇನೂ ಅಭಿವೃದ್ಧಿ ಮಾಡಿದ್ದಾರೆ. ನಾವೇನೂ ಅಭಿವೃದ್ಧಿ ಮಾಡಿದ್ದೇವೆ ಎಂದು ಚರ್ಚೆ ಮಾಡೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಬಿಜೆಪಿ-ಜೆಡಿಎಸ್ ಬಹಿರಂಗ ಸವಾಲು ಹಾಕಿದರು.
ಇಂದು ಮೈಸೂರಿನಲ್ಲಿ ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನಾ ಸಮಾವೇಶ ಮತ್ತು 2,578 ಕೋಟಿ ರೂಪಾಯಿಗಳ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಿಎಂ, ಸಿದ್ದರಾಮಯ್ಯ ಶಕ್ತಿ ಪ್ರದರ್ಶನಕ್ಕಾಗಿ ಸಾಧನಾ ಸಮಾವೇಶ ಆಯೋಜನೆ ಮಾಡಿದ್ದಾರೆ ಎಂದು ಬಿಜೆಪಿ, ಜೆಡಿಎಸ್ ನವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.
ಬಿಜೆಪಿ ಜೆಡಿಎಸ್ ನವರು ನಮ್ಮ ಸಾಧನೆಯನ್ನು ಸಹಿಸಿಕೊಳ್ಳಲಾಗದೇ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಎಂದೂ ಸಹ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಕಮಲದ ಮೂಲಕವೇ ಬಿಜೆಪಿ ಅಧಿಕಾರಕ್ಕೆ ಬಂತು ಎಂದು ವಾಗ್ದಾಳಿ ನಡೆಸಿದರು.
ಇನ್ನೂ ಜೆಡಿಎಸ್ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ ಸಿಎಂ, ಜೆಡಿಎಸ್ ಸ್ಥಾನಗಳು ಚುನಾವಣೆಯಿಂದ ಚುನಾವಣೆಗೆ ಕಡಿಮೆಯಾಗ್ತಿವೆ. ನಾನು ಜೆಡಿಎಸ್ ನಲ್ಲಿದ್ದಾಗ 59 ಸ್ಥಾನ ಗೆದ್ದಿತ್ತು. ಈಗ 18ಕ್ಕೆ ಇಳಿದಿದ್ದೀರಿ. ಆ ನಂತರ ಜೆಡಿಎಸ್ ಏಕೆ ಹೆಚ್ಚು ಸ್ಥಾನ ಗೆದ್ದಿಲ್ಲ ದೇವೇಗೌಡ್ರೇ? ಕುಮಾರಸ್ವಾಮಿಯವರೇ? ಜೆಡಿಎಸ್ ಇನ್ನೆಂದೂ ಅಧಿಕಾರಕ್ಕೆ ಬರೋದಿಲ್ಲ. ಬಿಜೆಪಿ ಜೆಡಿಎಸ್ ಒಂದಾಗಿದ್ದರೂ ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಒಟ್ಟು 24 ಇಲಾಖೆಗಳ 74 ಕಾಮಗಾರಿಗಳಿಗೆ ಸಿಎಂ ಇಂದು ಚಾಲನೆ ನೀಡಿದ್ದು, ಚೆಸ್ಕಾಂ ಇಲಾಖೆಯ 408 ಕೋಟಿ, ರಸ್ತೆ ಅಭಿವೃದ್ಧಿ ಕಾಮಗಾರಿಗೆ 393 ಕೋಟಿ, ಅರಮನೆ ಮಾದರಿಯಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ 120 ಕೋಟಿ, ವಿದ್ಯಾರ್ಥಿ ನಿಲಯಗಳಿಗೆ 108 ಕೋಟಿ, ಕ್ಯಾನ್ಸರ್ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆ ಕಟ್ಟಡಗಳ ನಿರ್ಮಾಣಕ್ಕೆ 175 ಕೋಟಿ, ವಸ್ತು ಪ್ರದರ್ಶನ ಪ್ರಾಧಿಕಾರಕ್ಕೆ 23 ಕೋಟಿ ಸೇರಿದಂತೆ ಹತ್ತು ಹಲವು ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯ ಸಭೆಯ ವಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಸಿ.ಮಹದೇವಪ್ಪ ಸೇರಿದಂತೆ ಹಲವು ಸಚಿವರು, ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.