


ಡೈಲಿ ವಾರ್ತೆ: 21/ಜುಲೈ/2025


ಬಂಟ್ವಾಳ : ಗ್ರಾಮಾಂತರ ಪೊಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ಆತ್ಮಹತ್ಯೆ

ಬಂಟ್ವಾಳ : ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ (ಕ್ರೈಮ್ ವಿಭಾಗ) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರು ನಿಗೂಢವಾಗಿ ಆತ್ಮಹತ್ಯೆಗೆ ಶರಣಾದ ಘಟನೆ ಭಾನುವಾರ ಸಂಜೆ ಬೆಳಕಿಗೆ ಬಂದಿದೆ.
ಮೃತ ಪೊಲೀಸ್ ಅಧಿಕಾರಿಯನ್ನು ಉತ್ತರ ಕನ್ನಡ ಮೂಲದ ಕೀರಪ್ಪ (54) ಎಂದು ಹೆಸರಿಸಲಾಗಿದೆ.
ಬಂಟ್ವಾಳ ಪೇಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಅವರು ಅದೇ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಶಿರಸಿ ಠಾಣೆಯಿಂದ ಕಳೆದ 5 ತಿಂಗಳ ಹಿಂದೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ಅವರು ವರ್ಗಾವಣೆಯಾಗಿ ಬಂದಿದ್ದರು. ಇವರ ಕುಟುಂಬ ಉತ್ತರ ಕನ್ನಡದಲ್ಲೇ ವಾಸ್ತವ್ಯ ಇದ್ದು, ಇವರೊಬ್ಬರೇ ಬಂಟ್ವಾಳ ಪೇಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಇವರು ಭಾನುವಾರ ಬೆಳಿಗ್ಗೆಯಿಂದ ಕರ್ತವ್ಯಕ್ಕೆ ಬಂದಿರಲಿಲ್ಲ. ಮೊಬೈಲ್ ಕರೆ ಮಾಡಿದರೂ ಸ್ವೀಕರಿಸದೆ ಇದ್ದ ಹಿನ್ನಲೆಯಲ್ಲಿ ಸಂಶಯಗೊಂಡ ಠಾಣಾ ಪೊಲೀಸರು ಸಂಜೆ ವೇಳೆ ಪಿಎಸ್ಸೈ ವಾಸವಾಗಿರುವ ಬಾಡಿಗೆ ಮನೆಗೆ ಹೋಗಿ ನೋಡಿದಾಗ ಮನೆಗೆ ಬೀಗ ಹಾಕಲಾಗಿತ್ತು. ಕರೆದರೂ ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದಾಗ ಕಿಟಕಿಯಲ್ಲಿ ನೋಡಿದಾಗ ಕೋಣೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ.
ಕೃತ್ಯಕ್ಕೆ ಕಾರಣ ಏನು ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ತನಿಖೆ ಮುಂದುವರಿದಿದೆ.