ತನಿಖೆಗೂ ಮುನ್ನ ಧರ್ಮಸ್ಥಳದ ತೇಜೋವಧೆ ಮಾಡುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ – ಸಿ.ಟಿ.ರವಿ

ಬೆಂಗಳೂರು: ಧರ್ಮಸ್ಥಳ ವಿಷಯಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರಕಾರ ಎಸ್‌ಐಟಿ ನೇಮಕ ಮಾಡಿದೆ. ಅದನ್ನು ನಾವು ಸ್ವಾಗತಿಸುತ್ತೇವೆ. ತನಿಖೆ ಪ್ರಾಮಾಣಿಕವಾಗಿ, ಪಾರದರ್ಶಕವಾಗಿ ನಡೆಯಲಿ. ತಪ್ಪು ಯಾರೇ ಮಾಡಿದ್ದರೂ ತಪ್ಪಿಗೆ ಶಿಕ್ಷೆಯಾಗಲಿ. ತನಿಖೆಗೆ ನಾವು ಮಧ್ಯಪ್ರವೇಶಿಸುವುದಿಲ್ಲ. ಆದರೆ ತನಿಖೆಗೆ ಮುನ್ನವೇ ಕೆಲವರು ತನಿಖೆ ನಡೆಸಿ ತೀರ್ಪು ಕೊಡುವ ಪ್ರವೃತ್ತಿ ಸ್ವೀಕಾರಾರ್ಹವಲ್ಲ ಎಂದು ಸಿ.ಟಿ. ರವಿ ತಿಳಿಸಿದರು.

ಧರ್ಮಸ್ಥಳ ಎಂಬ ಸಂಸ್ಥೆಯನ್ನೇ ಅನುಮಾನಿಸುವ ಮುಖ್ಯಸ್ಥರನ್ನೇ ತಪ್ಪಿತಸ್ಥರೆಂಬಂತೆ ಬಿಂಬಿಸುವ ಷಡ್ಯಂತ್ರದ ವಿರುದ್ಧ ನಾವಿದ್ದೇವೆ. ಧರ್ಮಸ್ಥಳ ಟ್ರಸ್ಟ್ ಚೋಳರ ಕಾಲದ 293 ದೇವಾಲಯಗಳನ್ನು ಪುನರ್ ನಿರ್ಮಾಣ ಮಾಡಿದೆ. ಸ್ವಯಂಸೇವಾ ಸಂಘಗಳ 55 ಲಕ್ಷ ಸದಸ್ಯರು ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಸಂಸ್ಥೆ ಜತೆಗೆ ಜೋಡಿಸಿಕೊಂಡು ಕೆಲಸ ಮಾಡುತ್ತಿದ್ದಾರೆ.
900 ಕೆರೆಗಳ ಜೀರ್ಣೋದ್ಧಾರ ಕೆಲಸವನ್ನು ಮಾಡಿದೆ. ಧರ್ಮಸ್ಥಳದ ತೇಜೋವಧೆ ಮಾಡುವುದನ್ನು ಅಥವಾ ವಿಚಾರಣೆ ಇಲ್ಲದೆ ಗಲ್ಲಿಗೇರಿಸುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇನ್ನು ಮುಂದೆಯೂ ಇದನ್ನು ಹೀಗೇ ಮುಂದುವರಿಸಿದರೆ ನಾವು ಬಿಡುವುದಿಲ್ಲ. ಸಜ್ಜನರ ಮೌನ ದುರ್ಜನರಿಗೆ ದಾರಿಯಾಗುವುದಕ್ಕೆ ನಾವು ಅವಕಾಶ ಮಾಡಿಕೊಡುವುದಿಲ್ಲ ಎಂದು ಹೇಳಿದರು.