ಡೈಲಿ ವಾರ್ತೆ: 31/ಜುಲೈ/2025

ಭಟ್ಕಳ| ದೋಣಿ ದುರಂತದಲ್ಲಿ ನಾಲ್ವರು ನಾಪತ್ತೆ ಪ್ರಕರಣ – ಓರ್ವನ ಮೃತದೇಹ ಪತ್ತೆ!

ಭಟ್ಕಳ: ಭಟ್ಕಳದ ತೆಂಗಿನಗುಂಡಿಯ ಸಮುದ್ರದಲ್ಲಿ ಮೀನುಗಾರಿಕೆ ತೆರಳಿ ದೋಣಿ ಮಗುಚಿ ನಾಪತ್ತೆಯಾಗಿದ್ದ ನಾಲ್ವರು ಮೀನುಗಾರರ ಪೈಕಿ ಓರ್ವನ ಮೃತದೇಹ ಇಂದು ಪತ್ತೆಯಾಗಿದೆ.

ಮೃತಪಟ್ಟ ಮೀನುಗಾರ ರಾಮಕೃಷ್ಣ ಮೊಗೇರ ಎಂದು ಗುರುತಿಸಲಾಗಿದ್ದು. ಇಂದು ಮಧ್ಯಾಹ್ನ ತೆಂಗಿನ ಗುಂಡಿಯ ಹೊನ್ನೆಗದ್ದೆ ಸಮುದ್ರ ತೀರದಲ್ಲಿ ಮೃತದೇಹ ಪತ್ತೆಯಾಗಿದೆ.

ಮೀನುಗಾರಿಕೆಗೆ ತೆರಳಿದ್ದ 6 ಮಂದಿ ಮೀನುಗಾರರು ಇದ್ದ ದೋಣಿ ಪಲ್ಟಿಯಾಗಿ ನಾಲ್ವರು ಕಾಣೆಯಾಗಿದ್ದರು. ಇಬ್ಬರನ್ನು ರಕ್ಷಣೆ ಮಾಡಲಾಗಿತ್ತು.

ಇಂದು ಪತ್ತೆಯಾದ ಓರ್ವನ ಮೃತದೇಹವನ್ನು ಆಂಬುಲೆನ್ಸ್ ಮೂಲಕ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಇನ್ನುಳಿದ ಮೂವರು ಮೀನುಗಾರರ ಪತ್ತೆಗಾಗಿ ಶೋಧಕಾರ್ಯ ಮುಂದುವರಿದಿದೆ.