


ಡೈಲಿ ವಾರ್ತೆ: 31/ಜುಲೈ/2025


ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆ ಮುಂಡಗೋಡ ತಾಲೂಕ ಸಮಿತಿ ವತಿಯಿಂದ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಸಸಿ ನೆಡುವ ಮೂಲಕ ಪತ್ರಿಕಾ ದಿನಾಚರಣೆ ಆಚರಣೆ

ಮುಂಡಗೋಡ: ದೇವರು ಉಚಿತವಾಗಿ ನೀಡಿರುವ ಪರಿಸರವನ್ನು ಉಳಿಸಿದರೆ ಆಸ್ಪತ್ರೆಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡುವುದು ತಪ್ಪುತ್ತದೆ. ಕೇವಲ ಭಾಷಣ ಮಾಡುವುದರಿಂದ ಪರಿಸರ ರಕ್ಷಣೆ ಮಾಡಲಾಗುವುದಿಲ್ಲ ಬದಲಾಗಿ ಗಿಡಗಳನ್ನು ನೆಟ್ಟು ಅವುಗಳ ಪೋಷಣೆ ಮಾಡಬೇಕು ಎಂದು ಮಾಜಿ ಶಾಸಕ ವಿ.ಎಸ್ ಪಾಟೀಲ ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆ ಮುಂಡಗೋಡ ತಾಲೂಕ ಸಮಿತಿ ಹಾಗೂ ಅರಣ್ಯ ಇಲಾಖೆ ಮುಂಡಗೋಡ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಗರದ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಪತ್ರಿಕಾ ದಿನಾಚರಣೆ ಹಾಗೂ ವನ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪರಿಸರ ಮತ್ತು ಅರಣ್ಯ ರಕ್ಷಣೆ ಕೇವಲ ಅರಣ್ಯ ಇಲಾಖೆ ಹಾಗೂ ಸರ್ಕಾರಕ್ಕೆ ಮಾತ್ರ ಸೀಮಿತವಲ್ಲ. ಪರಿಸರ ಉಳಿಸಬೇಕಿರುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ, ದೇಶದ ಅರಣ್ಯ ರಕ್ಷಣೆ ಕಾನೂನು ಪ್ರತಿಯೊಬ್ಬರು ಪಾಲಿಸಬೇಕು.ಪತ್ರಿಕಾರಂಗ ಹಿಂದಿನ ಪತ್ರಿಕಾ ಮಾದ್ಯಮಕ್ಕೂ ತೀವ್ರ ವ್ಯತ್ಯಾಸವಿದೆ. ಇಂದಿನ ಸಾಮಾಜಿಕ ಜಾಲ ತಾಣದ ರಬಸದಿಂದ ಪತ್ರಿಕೆಗಳು ನಡೆಸುವುದು ಕಷ್ಟಸಾದ್ಯವಾಗುತ್ತಿದೆ. ನೈಜ ಹಾಗೂ ಸ್ಪಷ್ಟ ವರದಿಗಳು ಪತ್ರಿಕೆಯಲ್ಲಿ ಸಿಗುತ್ತವೆ ಹಾಗಾಗಿ ಪತ್ರಿಕೆಗಳ ಉಳಿವಿಗಾಗಿ ಹೆಚ್ಚೆಚ್ಚು ಪತ್ರಿಕೆ ಓದುವ ಹವ್ಯಾಸ ಮಾಡಿಕೊಳ್ಳಬೇಕು. ಪತ್ರಿಕೆ ಓದುವುದರಿಂದ ಸಾಮಾನ್ಯ ಜ್ಞಾನ ಕೂಡ ಹೆಚ್ಚುತ್ತದೆ.

ಹಿಂದಿನ ದಿನಗಳಲ್ಲಿ ಒಳ್ಳೆಯ ವರದಿಗೆ ಸತ್ಕರಿಸಲಾಗುತ್ತಿತ್ತು. ಆದರೆ ಇಂದಿನವರಿಗೆ ಸತ್ಯ ಹಾಗೂ ನೈಜ ವರದಿಯನ್ನು ಅರಗಿಸಿಕೊಳ್ಳುವುದಿಲ್ಲ. ತೀವ್ರ ಕಷ್ಟವಾಗುತ್ತಿರುವುದರಿಂದ ವರದಿಗಾರರಿಗೆ ತೊಂದರೆ ಕೊಡುವ ಹುನ್ನಾರ ಮಾಡುತ್ತಾರೆ. ಮೊಬೈಲ್, ವಾಟ್ಸಾಪ್ ಹಾಗೂ ಟಿ.ವಿ ಮಾದ್ಯಮದ ಹಾವಳಿಯಿಂದ ಪತ್ರಿಕೆ ಓದುವವರ ಸಂಖ್ಯೆ ಕ್ಷೀಸುತ್ತಿದೆ.
ಮುಂಡಗೋಡ ವಲಯ ಅರಣ್ಯಾಧಿಕಾರಿ ವಾಗೀಶ ಬಾಚಿನಕೊಪ್ಪ ಮಾತನಾಡಿ, ಪತ್ರಿಕೆ ಮತ್ತು ಪರಿಸರಕ್ಕೆ ಅವಿನಾಭಾವ ಸಂಬಂಧವಿದೆ. ಸಾರ್ವಜನಿಕರಲ್ಲಿ ಜಾಗೃತಿ ಬರಬೇಕಾದರೆ ಪತ್ರಿಕಾ ರಂಗದ ಪಾತ್ರ ಅತ್ಯಗತ್ಯವಾಗಿದ್ದು, ಪರಿಸರ ರಕ್ಷಣೆ ಜಾಗೃತಿ ಕಾರ್ಯಕ್ರಮದ ಮೂಲಕ ಪತ್ರಿಕಾ ದಿನಾಚರಣೆ ಆಚರಿಸಿರುವುದು ವಿಶೇಷವಾಗಿದೆ. ಸಂವಿಧಾನದ ಪ್ರಕಾರ ನೈಸರ್ಗಿಕ ಸಂಪತ್ತು ರಕ್ಷಣೆ ಮಾಡುವುದು ಮೂಲಭೂತ ಕರ್ತವ್ಯವಾಗಿದೆ ಎಂದರು.
ಬಿಜೆಪಿ ತಾಲೂಕಾಧ್ಯಕ್ಷ ಮಂಜುನಾಥ ಪಾಟೀಲ ಮಾತನಾಡಿ, ಭಾರತ ದೇಶಕ್ಕೆ ಸ್ವಾತಂತ್ರ ಕೊಡಿಸುವಲ್ಲಿ ಪತ್ರಿಕಾ ರಂಗದ ಪಾತ್ರ ಮಹತ್ವದ್ದಾಗಿತ್ತು. ಪತ್ರಿಕಾ ವರದಿಯಿಂದ ಕ್ರಾಂತಿಗಳೇ ನಡೆದಿದ್ದು, ಸ್ವಾತಂತ್ರ ಹೋರಾಟದ ಕಿಚ್ಚು ಹಚ್ಚಿದ್ದವು. ಸಂವಿಧಾನ ಅಂಗ ಕೂಡ ಒಂದಾಗಿದೆ. ಸಾವಿರ ಕೂಗು ಒಂದು ಲೇಖನಿಗೆ ಸಮಾನವಾಗಿದೆ. ಇತ್ತೀಚಿನ ದಿನಗಳಲ್ಲಿ ಬಹು ಸಂಖ್ಯೆಯಲ್ಲಿ ಪರಿಣಾಮಕಾರಿ ವರದಿಗಳು ಪ್ರಕಟವಾಗುತ್ತಿವೆ. ಆದರೆ ಓದುಗರ ಸಂಖ್ಯೆ ಕ್ಷೀಣಿಸುತ್ತಿರುವುದು ವಿಷಾದನಿಯ. ಸಮಾಜದಲ್ಲಿ ನಡೆಯುವ ಅಂಕು ಡೊಂಕುಗಳನ್ನು ಬೆಳಕಿಗೆ ತರುವ ಕೆಲಸವನ್ನು ಪತ್ರಕರ್ತರು ಮಾಡುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ಗಾಗಿ ಪರದಾಡಿದ ಆ ದಿನಗಳನ್ನು ಮರೆಯುವಂತಿಲ್ಲ. ಹಾಗಾಗಿ ಗಿಡ ಮರಗಳನ್ನು ಬೆಳೆಸಿ ಪರಿಸರ ಉಳಿಸಬೇಕಿದೆ. ನಮ್ಮಲ್ಲಿ ನಿರಂತರ ಮಳೆಯಾಗುತ್ತಿದೆ. ಆದರೆ ಬಯಲು ಸೀಮೆಯಲ್ಲಿ ಗಿಡ ಮರಗಳು ಇಲ್ಲದೆ ಇರುವುದರಿಂದ ಮಳೆಯಾಗದೆ ಬೆಳೆಗಳು ಒಣಗುತ್ತಿವೆ. ಹಾಗಾಗಿ ಗಿಡ ಮರಗಳನ್ನು ಬೆಳೆಸಲು ಹೆಚ್ಚಿನ ಆದ್ಯತೆ ನೀಡಿ ಪರಿಸರ ರಕ್ಷಣೆ ಮಾಡಬೇಕಿದೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆ ತಾಲೂಕಾಧ್ಯಕ್ಷ ಸಂತೋಷ ದೈವಜ್ಞ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೈ.ಪಿ ಬುಜಂಗಿ ಪ್ರಾಸ್ಥಾವಿಕ ಮಾತನಾಡಿದರು. ಮುಂಡಗೋಡ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿ ಹುಲಕೋಟಿ, ಸಂಘದ ಜಿಲ್ಲಾಧ್ಯಕ್ಷ ನಾಗರಾಜ ದೈವಜ್ಞ, ಪರಶುರಾಮ ತಹಸೀಲ್ದಾರ, ಜಗದೀಶ ದೈವಜ್ಞ, ಶ್ರೀನಿವಾಸ ದೈವಜ್ಞ, ಶಿವರಾಜ ಶಿರಾಲಿ, ಮಲ್ಲಿಕಾರ್ಜುನ ಗೌಳಿ, ಉಪ ವಲಯ ಅರಣ್ಯಾಧಿಕಾರಿ ಅರುಣ ಕಾಶಿ, ಅಜ್ಜಪ್ಪ, ಅರ್ಜುನ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಉಪ ವಲಯ ಅರಣ್ಯಾಧಿಕಾರಿ ಶ್ರೀಶೈಲ ಐನಾಪುರ ಸ್ವಾಗತಿಸಿ ನಿರೂಪಿಸಿದರು.